ತಿರುವಿ ನೋಡಿ

Friday 23 December 2022

ಗಣಿತ ದಿನ: ಪೋಷಕರೊಬ್ಬರ ಪ್ರತಿಕ್ರಿಯೆ

 

ಸಿದ್ದಾಪುರ ಪ್ರೌಢಶಾಲೆಯಲ್ಲಿ ನಡೆದ ಗಣಿತ ದಿನಾಚರಣೆಯ ಕುರಿತು ಶ್ರೀಮತಿ‌ ಪೂರ್ಣಿಮಾ ಕಮಲಶಿಲೆ ತಮ್ಮ ಫೇಸ್‌ಬುಕ್‌ ಗೋಡೆಯ ಮೇಲೆ ಹಂಚಿಕೊಂಡ ಬರೆಹವಿದು.

---------------------------








---------------------------


ತರಗತಿಯೊಳಗಿನ ಕಲಿಕೆಗಿಂತ ತರಗತಿಯಾಚೆ ಕಲೆತು ಕಲಿಯುವುದು,ಸ್ಪರ್ಧೆ, ಪ್ರಯೋಗ, ಮಾದರಿ, ಚಿತ್ರಕಲೆ, ರಸಪ್ರಶ್ನೆ ಎಂದರೆ ಈ ವಿದ್ಯಾರ್ಥಿ ಗಡಣಕ್ಕೆ ನೂರಾನೆಯ ಉತ್ಸುಕತೆ.

ಇವತ್ತು ಗಣಿತ ದಿನವಂತೆ. ನನ್ನ ಮಗನ ಶಾಲೆಯಲ್ಲಿ ಎರಡು ದಿನಗಳಿಂದ ಮಕ್ಕಳೆಲ್ಲ ಅದೆಷ್ಟು ಚುರುಕಾಗಿ ಲವಲವಿಕೆಯಿಂದ ಈ ದಿನದ ಆಚರಣೆಗೆ ತಯಾರಿ ಮಾಡಿಕೊಂಡರು. ನಮ್ಮ ಸರಕಾರಿ ಶಾಲೆಗಳಲ್ಲಿ ಈಗ ಎಲ್ಲ ವಿಷಯಗಳಿಗೂ ಕ್ಲಬ್/ ಸಂಘಗಳಿವೆ. ವಿಷಯವಾರು ಶಿಕ್ಷಕರು ಬಹಳ ಕ್ರಿಯಾಶೀಲರಾಗಿ ಮಕ್ಕಳನ್ನು ಚಟುವಟಿಕೆಯಲ್ಲಿ ತೊಡಗುವಂತೆ ಪ್ರೇರೇಪಿಸುತ್ತಾರೆ.

ಮಕ್ಕಳೂ ಕೂಡ ಅಂಜಿಕೆ ಇಲ್ಲದೆ ಎಲ್ಲ ಚಟುವಟಿಕೆಗಳಲ್ಲಿ ನಾ ಮುಂದು ತಾ ಮುಂದು ಎಂದು ತೊಡಗಿಸಿಕೊಳ್ಳುತ್ತಾರೆ.

ಗಣಿತ ದಿನದ ಅಂಗವಾಗಿ ಗಣಿತದ ರಸಪ್ರಶ್ನೆ, ಗಣಿತದ ಮಾದರಿಗಳ ತಯಾರಿ, ಗಣಿತಜ್ಞರ ಚಿತ್ರ ಬಿಡಿಸುವ ಸ್ಪರ್ಧೆ ಹಮ್ಮಿಕೊಂಡಿದ್ದಾರೆ ಎಂದು ನನ್ನ ಮಗ ನಿನ್ನೆ ಶಾಲೆಯಿಂದ ಬಂದವನೆ ವರದಿ ಒಪ್ಪಿಸಿದ್ದ.






ರಸಪ್ರಶ್ನೆ ಸ್ಪರ್ಧೆ ನಿನ್ನೆಯೆ ನಡೆಸಿದರಂತೆ, ಇಂದು ವಿದ್ಯಾರ್ಥಿ ಗಳು ಬಿಡಿಸಿದ ಚಿತ್ರಗಳು ಮತ್ತು ಗಣಿತ ಮಾದರಿಗಳ ಪ್ರದರ್ಶನ ಮತ್ತು ಸ್ಪರ್ಧೆ ನಡೆಯಿತು. ಜೊತೆಗೆ ಸಭಾ ಕಾರ್ಯಕ್ರಮ ಆಯೋಜಿಸಿ ಗಣಿತ ಶಿಕ್ಷಕರು ,ವಿಜ್ಞಾನ ಶಿಕ್ಷಕರು ಗಣಿತದ ಗಂಭೀರತೆ,ನಿಖರತೆ, ಮೋಜು, ಚುರುಕುಗಳ ಕುರಿತು ತಿಳಿಸುವುದರ ಜೊತೆಜೊತೆಗೆ ರಾಮಾನುಜಂ, ಹಾರ್ಡಿಯವರ ಕುರಿತು ಒಂದಿಷ್ಟು ವಿಷಯಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು. ಕೆಲವು ವಿದ್ಯಾರ್ಥಿಗಳು ಗಣಿತದ ಕುರಿತು ಅವರ ಅರಿವನ್ನು ಮಾತಿನ ಮೂಲಕ ತೆರೆದಿಟ್ಟರು. ಸ್ಪರ್ಧೆಯಲ್ಲಿ ವಿಜೇಯರಾದವರಿಗೆ ಬಹುಮಾನ ವಿತರಣೆ ನಡೆಯಿತು.

ಹೀಗೆ ಗಣಿತ ದಿನ ಲೆಕ್ಕಕ್ಕೊಂದು ದಿನವಾಗಲಿಲ್ಲ. ಲೆಕ್ಕದ ಹಬ್ಬವೇ ಆಯಿತು ಎಂದು ಮಗ ಸಂತಸದಿಂದ ವರದಿ ನೀಡಿದ.

ನಾವೆಲ್ಲ ಇಪ್ಪತ್ತೈದು ವರ್ಷದ ಹಿಂದೆ ಕಲಿತ ಸರಕಾರಿ ಶಾಲೆಗೂ ,ಈಗ  ಇರುವ ಸರಕಾರಿ ಶಾಲೆಗೂ ಇರುವ ಅಜಗಜಾಂತರ ಹೊಟ್ಟೆ ಉರಿಸಿತು. ನಾನೂ ಈಗ ಸರಕಾರಿ ಶಾಲೆಯ ವಿದ್ಯಾರ್ಥಿ ಆಗಿರಬೇಕಿತ್ತು ಎಂದು ಮನ ಮತ್ತೆ ಮತ್ತೆ ಕೂಗಿತು.

ಅನುಭವಿ ಮತ್ತು ಉತ್ಸಾಹಿ ಶಿಕ್ಷಕರು ಸರಕಾರಿ ಶಾಲೆಯ ಜೀವಾಳ. ಅಂತಹ  ಶಿಕ್ಷಕರ ತಂಡ ನಮ್ಮ ಸರಕಾರಿ ಪ್ರೌಢ ಶಾಲೆ ಸಿದ್ಧಾಪುರ ,ಕುಂದಾಪುರ ತಾಲೂಕು,ಉಡುಪಿ ಜಿಲ್ಲೆಯಲ್ಲಿ ಇರುವುದು ಈ ಭಾಗದ ವಿದ್ಯಾರ್ಥಿಗಳ ಸೌಭಾಗ್ಯ. ಊರಿನವರಿಗೆ, ಪೋಷಕರಿಗೆ ಇದು  ಹೆಮ್ಮೆಯ ಸಂಗತಿ.

ಗಣಿತ ದಿನ ಆಯೋಜಿಸಿದ ಶಿಕ್ಷಕರ ತಂಡಕ್ಕೆ ಕೃತಜ್ಞತೆಗಳು.


ಪೂರ್ಣಿಮಾ ಕಮಲಶಿಲೆ.

-----------------------------

ಈ ಸುದ್ದಿಯನ್ನೂ ಓದಿ:

ಸಿದ್ಧಾಪುರ ಹೈಸ್ಕೂಲಿನಲ್ಲಿ ಗಣಿತ ದಿನಾಚರಣೆ



No comments:

Post a Comment