Tuesday 24 August 2021

ಸಿದ್ಧಿ- ಸೆಪ್ಟಂಬರ್‌ 2021

ಅಮ್ಮ

ದೇವರು ಒಬ್ಬನೇ ನಾಮ ಹಲವು

ತಾಯಿಯೊಬ್ಬಳು ನಾಮವು ಹಲವು

ಮಾತೆಯಿಂದಲೇ

ಬದಲಾಗುವುದು ಮಕ್ಕಳ ಮನವು

ಮಕ್ಕಳಿಂದಲೇ ಹೆಚ್ಚುವುದು

ತಾಯಿಯ ಒಲವು

-ಕೃತಿ ಶೆಟ್ಟಿ

Wednesday 18 August 2021

ಗ್ರಾಹಕ ಜಾಗೃತಿಗಾಗಿ ಸ್ಪರ್ಧೆಗಳು

 ಗ್ರಾಹಕ ಜಾಗೃತಿಗಾಗಿ ನಮ್ಮ ಶಾಲೆಯ ಗ್ರಾಹಕ ಕ್ಲಬ್ ವಿದ್ಯಾರ್ಥಿಗಳಿಗಾಗಿ ಈ ಕೆಳಗಿನ ಸ್ಪರ್ಧೆಗಳನ್ನು ಹಮ್ಮಿಕೊಂಡಿದೆ.


8 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ
ಜಿಲ್ಲಾ ಬಳಕೆದಾರ ವೇದಿಕೆಗೆ ದೂರುಪತ್ರ ಬರೆಯುವ ಸ್ಪರ್ಧೆ

ಗ್ರಾಹಕರಾಗಿ ವಸ್ತು ಅಥವಾ ಸೇವೆಯನ್ನು ಪಡೆಯುವಾಗ ನಿಮಗಾಗಿರುವ ನಷ್ಟ/ ಶೋಷಣೆಯನ್ನು ಕಲ್ಪಿಸಿಕೊಂಡು
ಸಂಚಾಲಕರು, ಜಿಲ್ಲಾ ಬಳಕೆದಾರರ ವೇದಿಕೆ, ಉಡುಪಿ
ಇವರಿಗೆ ಪತ್ರ ಬರೆಯುವ ಸ್ಪರ್ಧೆ.

9 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ
ಬಳಕೆದಾರ ಜಾಗೃತಿಯ ರಸಪ್ರಶ್ನೆ: ಈ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ನೆರವಾಗಲು
ಗ್ರಾಹಕ ಪ್ರಜ್ಞೆಗೆ ಸಂಬಂಧಿಸಿದ ಲೇಖನ, ವಿಡಿಯೋಗಳನ್ನು ಎಚ್ಚರ ಗ್ರೂಪಿನಲ್ಲಿ ಹಂಚಿಕೊಳ್ಳಲಾಗುವುದು.

10 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ
ಗ್ರಾಹಕ ಜಾಗೃತಿಯ ಪೋಸ್ಟರ್ ರಚನಾ ಸ್ಪರ್ಧೆ
ಗ್ರಾಹಕ ಶೋಷಣೆ ಮತ್ತು ಪರಿಹಾರೋಪಾಯಗಳನ್ನು ಸೂಚಿಸುವ ಹಾಗೂ ಜಾಗೃತಿ  ಮೂಡಿಸುವ ಪೋಸ್ಟರ್ ರಚನೆ ಮಾಡಬಹುದು. ಪೋಸ್ಟರ್  ಕನಿಷ್ಟ ಒಂದಾದರೂ ಅಗ್ಮಾರ್ಕ್, ಐ.ಎಸ್ .ಐ, ಪಿ.ಏಫ್.ಓ, ಹಾಲ್ ಮಾರ್ಕ್ ಮತ್ತಿತರ ಗುಣಮಟ್ಟ ಸೂಚಕ ಚಿನ್ಹೆಯನ್ನು ಹೊಂದಿರಬೇಕು. ಘೋಷಣೆ, ಸೂಚನೆ, ಎಚ್ಚರಿಕೆಯ ಪದ/ವಾಕ್ಯಗಳನ್ನೂ ಪೋಸ್ಟರ್ ಒಳಗೊಳ್ಳಬಹುದು.
ಸೈಜ್: A2 ( ಅರ್ಧ ಡ್ರಾಯಿಂಗ್ ಹಾಳೆ ನೀಡಲಾಗುವುದು)
ಕ್ಲಿಕ್ ಮಾಡಿ👇🏼
https://surveyheart.com/form/6117e6991c04e4422e9a3032

ಸ್ಪರ್ಧೆಯ ದಿನಾಂಕವನ್ನು ಎಚ್ಚರ ವಾಟ್ಸಾಪ್‌ ಗ್ರೂಪಿನಲ್ಲಿ ಸೂಚಿಸಲಾಗುವುದು.


ಗ್ರಾಹಕ ಪ್ರಜ್ಞೆ ಎಂದರೇನು?

ಗ್ರಾಹಕರ ಹಕ್ಕು ಮತ್ತು ಸುರಕ್ಷತೆಯ ಸಲುವಾಗಿ ಪ್ರತಿವರ್ಷ ಮಾರ್ಚ್ ಹದಿನೈದರಂದು ವಿಶ್ವ ಗ್ರಾಹಕ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ಡಿಸೆಂಬರ್ 24ರಂದು ರಾಷ್ಟ್ರೀಯ ಗ್ರಾಹಕ ದಿನ ಆಚರಣೆಯಲ್ಲಿದೆ.


 ಗ್ರಾಹಕರ ಸಂರಕ್ಷಣೆಯನ್ನು ಗುರಿಯಾಗಿ ಇರಿಸಿಕೊಂಡು ನೂರಾರು ಕಾನೂನುಗಳು, ನ್ಯಾಯಾಲಯಗಳು, ಸಂಘಗಳು ಸ್ಥಾಪಿತವಾಗಿವೆ. ಹೋರಾಟಗಳು ನಡೆದಿವೆ. ಆದರೂ ಗ್ರಾಹಕರ ಶೋಷಣೆ ನಿರಂತರವಾಗಿ ಮುಂದುವರಿದಿದೆ.


ಗ್ರಾಹಕರು ಸಾಮಾನ್ಯವಾಗಿ ಕಲಬೆರಕೆ, ಅವಧಿ ಮೀರಿದ ಉತ್ಪನ್ನಗಳು, ಕಾಳಸಂತೆ, ಅಗತ್ಯಕ್ಕಿಂತ ಅಧಿಕ ರಾಸಾಯನಿಕಗಳ ಬಳಕೆ, ಉತ್ಪ್ರೇಕ್ಷಿತ ಜಾಹೀರಾತುಗಳು, ನಕಲಿ ಉತ್ಪನ್ನಗಳು, ಅಕ್ರಮ ದಾಸ್ತಾನು ಇತ್ಯಾದಿಗಳ ಮೂಲಕ ನಿರಂತರವಾಗಿ ಶೋಷಣೆಗೆ ಒಳಗಾಗುತ್ತಲೇ ಇದ್ದಾರೆ. ಗ್ರಾಹಕ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ತಿಳಿವಳಿಕೆಯ ಕೊರತೆ ಹಾಗೂ ಅವರು ಸಂಘಟಿತರಾಗದೇ ಇರುವುದು ಇಂತಹ ಶೋಷಣೆಗೆ ಕುಮ್ಮಕ್ಕು ನೀಡುತ್ತಿವೆ.


ಮಾರುಕಟ್ಟೆಯಲ್ಲಿ ವ್ಯವಹರಿಸುವ ಸಂದರ್ಭದಲ್ಲಿ ತಾನು ಮೋಸ ಹೋದಾಗ ಅಥವಾ ಶೋಷಣೆಗೆ ಒಳಗಾದಾಗ ಏನು ಮಾಡಬೇಕು ಎನ್ನುವುದರ ಅರಿವು ಪ್ರತಿ ವ್ಯಕ್ತಿಯಲ್ಲೂ ಇರಬೇಕು. ಇಂತಹ ಶೋಷಣೆಗಳನ್ನು ತಡೆಗಟ್ಟಲೆಂದೇ ನಮ್ಮಲ್ಲಿ 1986ರಲ್ಲಿ ಜಾರಿಗೆ ತರಲಾದ ಗ್ರಾಹಕ ಸಂರಕ್ಷಣಾ ಕಾಯ್ದೆಯು ಗ್ರಾಹಕರಿಗೆ 6 ಹಕ್ಕುಗಳನ್ನು ನೀಡಿದೆ.


1. ಸುರಕ್ಷತೆಯ ಹಕ್ಕು: ಗ್ರಾಹಕರು ತಮ್ಮ ಆರೋಗ್ಯ ಅಥವಾ ಜೀವಕ್ಕೆ ಹಾನಿಯುಂಟು ಮಾಡುವ ಉತ್ಪನ್ನ ಅಥವಾ ನ್ಯೂನತೆಗಳನ್ನು ಒಳಗೊಂಡ ಉತ್ಪನ್ನಗಳಿಂದ ರಕ್ಷಣೆ ಪಡೆಯುವ ಹಕ್ಕನ್ನು ಹೊಂದಿದ್ದಾರೆ.
2. ಮಾಹಿತಿ ಪಡೆಯುವ ಹಕ್ಕು: ಗ್ರಾಹಕರು ತಾವು ಖರೀದಿಸಲು ಇಚ್ಛಿಸುವ ಯಾವುದೇ ವಸ್ತುವಿನ ಬಗೆಗೆ ಸಂಪೂರ್ಣ ಮಾಹಿತಿ ಪಡೆಯುವ ಹಕ್ಕನ್ನು ಹೊಂದಿದ್ದಾರೆ.
3. ಆಯ್ಕೆಯ ಹಕ್ಕು: ಗ್ರಾಹಕರು ತಮಗೆ ಇಷ್ಟವಾದ ವಸ್ತುಗಳನ್ನು ಮಾತ್ರ ಖರೀದಿಸುವ ಹಕ್ಕನ್ನು ಹೊಂದಿದ್ದಾರೆ.
4. ದೂರು ಸಲ್ಲಿಕೆಯ ಹಕ್ಕು: ಗ್ರಾಹಕರು ತಮಗಾದ ಶೋಷಣೆ ಅಥವಾ ಅನ್ಯಾಯದ ವಿರುದ್ಧ ಗ್ರಾಹಕ ನ್ಯಾಯಾಲಯದಲ್ಲಿ ದೂರನ್ನು ಸಲ್ಲಿಸುವ ಹಕ್ಕನ್ನು ಹೊಂದಿದ್ದಾರೆ.
5. ಕುಂದುಕೊರತೆ ನಿವಾರಣೆ ಹಕ್ಕು: ಗ್ರಾಹಕರು ತಾವು ಖರೀದಿಸಿದ ವಸ್ತುಗಳಲ್ಲಿ ದೋಷಗಳಿದ್ದಲ್ಲಿ ಅಥವಾ ಸೇವೆಯಲ್ಲಿ ನ್ಯೂನತೆಗಳಿದ್ದಲ್ಲಿ ಅದಕ್ಕೆ ತಕ್ಕ ಪರಿಹಾರ ಪಡೆಯುವ ಹಕ್ಕನ್ನು ಹೊಂದಿದ್ದಾರೆ.
6. ಗ್ರಾಹಕ ಶಿಕ್ಷಣದ ಹಕ್ಕು: ಗ್ರಾಹಕರು ತಮ್ಮ ಹಕ್ಕು ಮತ್ತು ಕಾನೂನುಗಳ ಬಗೆಗೆ ಹಾಗೂ ಖರೀದಿಯ ಸಂದರ್ಭದಲ್ಲಿ ವಸ್ತುಗಳ ಬಗೆಗೆ ಸಂಪೂರ್ಣ ಮಾಹಿತಿ ಪಡೆಯುವ ಹಕ್ಕನ್ನು ಹೊಂದಿದ್ದಾರೆ.

ಇದಲ್ಲದೆ ವಿಶ್ವಸಂಸ್ಥೆಯು ಗ್ರಾಹಕನಿಗೆ, ಮೂಲಭೂತ ಅವಶ್ಯಕತೆಗಳನ್ನು ಪಡೆಯುವ, ಮಾಲಿನ್ಯ ಮುಕ್ತ ಪರಿಸರ ಹೊಂದುವ ಹಕ್ಕುಗಳನ್ನು ನೀಡಿದೆ.

ಗ್ರಾಹಕರಿಗೆ ತಮ್ಮದೇ ಆದ ಜವಾಬ್ದಾರಿಗಳೂ ಇವೆ. ಮುಖ್ಯವಾಗಿ, ಅವರಿಗೆ ತಮ್ಮ ಹಕ್ಕುಗಳ ಬಗೆಗೆ, ವಸ್ತುಗಳ ಗುಣಮಟ್ಟದ ಬಗೆಗೆ ಅರಿವಿರಬೇಕು. ಉದಾಹರಣೆಗೆ, ಅಗ್‍ಮಾರ್ಕ್, ಐಎಸ್‍ಐ, ಹಾಲ್ ಮಾರ್ಕ್ ಇತ್ಯಾದಿಗಳ ಬಗೆಗೆ ತಿಳಿವಳಿಕೆ ಇರಬೇಕು. ಶೋಷಣೆಗೆ ಒಳಗಾದ ಸಂದರ್ಭದಲ್ಲಿ ದೂರು ನೀಡಲು ಸಿದ್ಧರಿರಬೇಕು. ಸಣ್ಣ ಮೊತ್ತ ಎನ್ನುವ ಕಾರಣಕ್ಕೆ ದೂರು ನೀಡದೇ ಇರಬಾರದು.

















ಉತ್ಪ್ರೇಕ್ಷಿತ ಜಾಹೀರಾತುಗಳನ್ನು ನೋಡಿ ಮೋಸಹೋಗಬಾರದು. ವಸ್ತುಗಳನ್ನು ಖರೀದಿಸಿದಾಗ ಕಡ್ಡಾಯವಾಗಿ ರಸೀದಿ ಪಡೆದುಕೊಳ್ಳಬೇಕು. ವಸ್ತುಗಳನ್ನು ಎಚ್ಚರದಿಂದ ಪರಿಶೀಲಿಸಿ ಕೊಳ್ಳಬೇಕು. ಕಾಳಸಂತೆಯಲ್ಲಿನ ಅಥವಾ ನಕಲಿ ಪದಾರ್ಥಗಳನ್ನು ಕೊಳ್ಳಬಾರದು. ನೆನಪಿರಲಿ, ಅವಸರದಲ್ಲಿ ಖರೀದಿ ಒಳ್ಳೆಯದಲ್ಲ.


ಹತ್ತಿರದಲ್ಲಿನ ಗ್ರಾಹಕ ನ್ಯಾಯಾಲಯಗಳ ಬಗೆಗೆ ನಾವು ಮಾಹಿತಿ ಹೊಂದಿರಬೇಕು. ದೂರು ಕೊಡುವುದು ಹೇಗೆ ಎನ್ನುವ ಜಿಜ್ಞಾಸೆ ಬೇಕಾಗಿಲ್ಲ. ಗ್ರಾಹಕನ (ದೂರುದಾರ) ಹೆಸರು, ವಿಳಾಸ, ಕಕ್ಷಿದಾರನ ಹೆಸರು, ವಿಳಾಸ ಮತ್ತಿತರ ವಿವರಗಳು, ಖರೀದಿಸಿದ ವಸ್ತುವಿನ ನ್ಯೂನತೆಯ ಬಗೆಗೆ ಮಾಹಿತಿ, ದೂರಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಅಪೇಕ್ಷಿಸುವ ಪರಿಹಾರದ ರೂಪ ಇತ್ಯಾದಿಗಳನ್ನು ಒಂದು ಖಾಲಿ ಹಾಳೆಯಲ್ಲಿ ವಿವರವಾಗಿ ಬರೆದು ದೂರು ನೀಡಿದರೆ ಸಾಕು. ‌

ಗ್ರಾಹಕ ನ್ಯಾಯಾಲಯಗಳು ಗ್ರಾಹಕರಿಗೆ ಆದ ಅನ್ಯಾಯಗಳಿಗೆ, ಶೋಷಣೆಗಳಿಗೆ ಸೂಕ್ತ ಪರಿಹಾರ ಒದಗಿಸಿದ ಸಹಸ್ರಾರು ನಿದರ್ಶನಗಳಿವೆ. ಹಾಗಾಗಿ ವಸ್ತು ತಯಾರಿಕಾ ಅಥವಾ ಸೇವೆ ನೀಡುವ ಕಂಪನಿಗಳಿಂದ, ಮಾರಾಟಗಾರರಿಂದ ಅಥವಾ ಮಧ್ಯವರ್ತಿಗಳಿಂದ ನಮಗೆ ವಂಚನೆಯಾಗಿದೆ ಎನ್ನಿಸಿದರೆ ಗ್ರಾಹಕ ನ್ಯಾಯಾಲಯದಲ್ಲಿ ದೂರು ಸಲ್ಲಿಸಬೇಕು. ನಮಗಾದ ಅನ್ಯಾಯದ ಬಗೆಗೆ, ಹೋದರೆ ಹೋಗಲಿ ಎಂದು ಉದಾಸೀನ ಮಾಡಿದರೆ ಅದು ಮಾರಾಟಗಾರರು ಮತ್ತಷ್ಟು ಗ್ರಾಹಕರನ್ನು ಶೋಷಿಸಲು ಅನುವು ಮಾಡಿಕೊಡುತ್ತದೆ ಎನ್ನುವುದು ನೆನಪಿರಲಿ. ಗ್ರಾಹಕರಿಗೆ ತಮ್ಮ ಹಕ್ಕುಗಳು, ವಸ್ತುಗಳ ಗುಣಮಟ್ಟದ ಬಗೆಗೆ ಅರಿವಿರದಿದ್ದರೆ, ನಿರಂತರವಾಗಿ ಶೋಷಣೆಗೆ ಒಳಗಾಗುತ್ತಲೇ ಇರಬೇಕಾಗುತ್ತದೆ.


ಕರೆಮಾಡಿ
1800-425-9339



Friday 13 August 2021

ಎಸ್ಎಸ್ಎಲ್ ಸಿ ಫಲಿತಾಂಶ : ಸಿದ್ದಾಪುರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಉತ್ತಮ ಸಾಧನೆ



ಪ್ರತೀಕಾ 621
ತಾಲೂಕಿನಲ್ಲಿಯೇ ಅತಿ ಹೆಚ್ಚು ವಿದ್ಯಾರ್ಥಿಗಳಿರುವ ಸರ್ಕಾರಿ ಪ್ರೌಢಶಾಲೆಯಾಗಿರುವ ಸಿದ್ದಾಪುರ ಪ್ರೌಢಶಾಲೆಯ 207 ವಿದ್ಯಾರ್ಥಿಗಳು 2020 ನೇ ಸಾಲಿನ ಎಸ್ಎಸ್ಎಲ್ ಪರೀಕ್ಷೆಗೆ ಕುಳಿತುಕೊಂಡಿದ್ದರು. ಇವರಲ್ಲಿ 13 ವಿದ್ಯಾರ್ಥಿಗಳು ಆರು ನೂರಕ್ಕೂ ಹೆಚ್ಚು ಅಂಕ ಗಳಿಸಿದ್ದಾರೆ. 36 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲೂ 99 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲೂ ತೇರ್ಗಡೆಯಾಗಿರುತ್ತಾರೆ. 621 ಅಂಕಗಳಿಸಿದ ವಿದ್ಯಾರ್ಥಿನಿ ಪ್ರತೀಕ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದು 619 ಅಂಕಗಳಿಸಿದ ವಿದ್ಯಾರ್ಥಿನಿ ಚಂದ್ರ ಕೆಎಸ್ ಹಾಗೂ 618 ಅಂಕಗಳಿಸಿದ ಸೃಜನ್ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದ್ದಾರೆ. ಉತ್ತಮ ಫಲಿತಾಂಶ ದಾಖಲಿಸಿರುವುದಕ್ಕಾಗಿ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಎಸ್ ಡಿ ಎಮ್ ಸಿ ಯ ಸರ್ವ ಸದಸ್ಯರು ಎಲ್ಲ ವಿದ್ಯಾರ್ಥಿಗಳನ್ನು ಹಾಗೂ ಅಧ್ಯಾಪಕ ವೃಂದವನ್ನು ಅಭಿನಂದಿಸಿದ್ದಾರೆ.


600 ಕ್ಕೂ ಹೆಚ್ಚು ಅಂಕ ಪಡೆದ  ವಿದ್ಯಾರ್ಥಿಗಳು
ಪ್ರತೀಕ 621 | ಚಂದ್ರಾ ಕೆ.ಎಸ್ 619 | ಸೃಜನ್ 618 | ಧನ್ಯ 617 | ಪ್ರಗತಿ 617 | ಸನ್ಮತಿ 617 | ರಜತ್ 606 |ಅನುರಾದ 605 | ಸಾಕ್ಷಿ 604 | ಸಂಜನಾ 603 | ಸುಶಾಂತ್ 603 | ಶ್ರೀರಕ್ಷಾ 603| ಶರಣ್ಯ 601 |
ಕನ್ನಡ ಮಾಧ್ಯಮದಲ್ಲಿ ಪ್ರಥಮ-ಪ್ರಥ್ವಿ 581