Friday 6 March 2020

ಸಿದ್ಧಾಪುರ: ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ

3/3/2020 ಸಿದ್ಧಾಪುರ
ಸರಕಾರಿ ಪ್ರೌಢಶಾಲೆ, ಸಿದ್ಧಾಪುರ ಇದರ ಎನ್. ಎಸ್. ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರವು ಸಿದ್ಧಾಪುರದ ಪ್ರಾಥಮಿಕ ಶಾಲೆಯ ಅವರಣದಲ್ಲಿ  ನಡೆಯಿತು. ಸಿದ್ಧಾಪುರ ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಶ್ರೀಮತಿ ಸರೋಜಿನಿ ಶೆಡ್ತಿ ಎನ್. ಎಸ್. ಎಸ್ ಘಟಕದ ಧ್ವಜಾರೋಹಣ ನಡೆಸುವ ಮೂಲಕ ಶಿಬಿರಕ್ಕೆ ವಿದ್ಯುಕ್ತ ಆರಂಭ ನೀಡಿದರು. ಪ್ರೌಢಶಾಲಾ ಎಸ್. ಡಿ. ಎಂ. ಸಿ ಕಾರ್ಯಾಧ್ಯಕ್ಷರಾದ ಶ್ರೀ ಮಹೇಶ ನಾಯಕ, ಸ್ಥಳೀಯ ಲಯನ್ಸ್  ಕ್ಲಬ್ ಅಧ್ಯಕ್ಷರಾದ ಶ್ರೀ ಮನೋರಾಜ ಶೆಟ್ಟಿ ಮತ್ತು ಉಭಯ ಶಾಲೆಗಳ ಮುಖ್ಯ ಶಿಕ್ಷಕರಾದ ಶ್ರೀ ಶೈಲೇಂದ್ರನಾಥ ಮತ್ತು ಶ್ರೀ ನರಸಿಂಹ ನಾಯ್ಕ್  ಉಪಸ್ಥಿತರಿದ್ದರು.  ವಿದ್ಯಾರ್ಥಿ ಸ್ವಯಂ ಸೇವಕರಿಂದ ಗೌರವ ರಕ್ಷೆ ಪಡೆದ ನಂತರ ಮಾತನಾಡಿದ ಶ್ರೀಮತಿ ಸರೋಜಿನಿ ಶೆಡ್ತಿಯವರು “ ನಾಳಿನ ಪ್ರಜೆಗಳಾದ ಇಂದಿನ ವಿದ್ಯಾರ್ಥಿಗಳಲ್ಲಿ ಸೇವಾ ಭಾವನೆ ಬಲಿತು ಬೆಳೆಯಬೇಕು. ಅವರೇ ನಾಡಿನ ಸಿರಿ"  ಎಂದು ಧ್ವಜ ಸಂದೇಶ ನೀಡಿದರು.
   ಸಿದ್ಧಾಪುರ ಗ್ರಾಮ ಪಂಚಾಯತ್ ಮತ್ತು ಸಿದ್ಧಾಪುರದ ಗ್ರಾಮ ವಿಕಾಸ ಸಮಿತಿಯ ಸಹಕಾರದೊಂದಿಗೆ ಸ್ವಯಂ ಸೇವಕರು ಸಿದ್ಧಾಪುರ ಪೇಟೆಯ ಆಯಕಟ್ಟಿನ ಜಾಗಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಮಾಡುವುದರೊಂದಿಗೆ ಸಾರ್ವಜನಿಕರಲ್ಲಿ ಶುಚಿತ್ವದ ಕುರಿತು ಜಾಗೃತಿ ಮೂಡಿಸಿದರು. ಉದ್ಯಮಿ ಶ್ರೀಕಾಂತ ನಾಯಕ, ತಾಲೂಕು ಪಂಚಾಯತ ಸದಸ್ಯರಾದ ವಾಸುದೇವ ಪೈ, ಶ್ರೀ ಭಾಸ್ಕರ ಶೆಟ್ಟಿ ಶ್ರಮದಾನ ಕಾರ್ಯದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
  ಶ್ರಮದಾನ ಕಾರ್ಯದ ನಂತರ ಪ್ರಥಮ ಚಿಕಿತ್ಸೆಯ ಕುರಿತು ಅರಿವು ನೀಡುವಂತಹ `ಬದುಕಿ, ಬದುಕಿಸಿ’ ಪ್ರಾತ್ಯಕ್ಷಿಕೆ-ಉಪನ್ಯಾಸ ಕಾರ್ಯಕ್ರಮವನ್ನು ಸರಕಾರಿ ಪ್ರೌಢಶಾಲೆ, ಆವರ್ಸೆ ಇಲ್ಲಿನ ಶಿಕ್ಷಕರಾದ ಶ್ರೀ ಅಝಾದ್ ಮೊಹಮ್ಮದ್ ನಡೆಸಿಕೊಟ್ಟರು.

ಮಧ್ಯಾಹ್ನದ ಸಹಭೋಜನದ ನಂತರ ನಡೆದ ವಿದ್ಯಾರ್ಥಿಗಳ  ಸಾಂಸ್ಕೃತಿಕ ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ಸಫಲವಾಯಿತು. ಆನಂತರ ನಡೆದ ಶಿಬಿರದ ಸಮಾರೋಪ ಸಮಾರಂಭದಲ್ಲಿ `ಅರಿವಿನ ಅಂಗಣ’ ಪತ್ರಿಕಾ ಅಂಕಣಗಳ ಸಂಗ್ರಹವನ್ನು ಅನಾವರಣಗೊಳಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ರೋಹಿತಕುಮಾರ ಶೆಟ್ಟಿಯವರು “ ಪದವಿ ಹಂತದಿಂದ ಪ್ರೌಢ ಹಂತದವರೆಗೆ ರಾಷ್ಟ್ರೀಯ ಸೇವಾ ಯೋಜನೆಯನ್ನು ವಿಸ್ತರಿಸಿರುವುದು ಸ್ವಾಗತಾರ್ಹ. ಈ ಯೋಜನೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಹಕ್ಕಿಗಿಂತ ಕರ್ತವ್ಯವು ಪ್ರಧಾನ ಎಂದು ಅರಿಯುವಂತಾಗಲಿ”  ಎಂದು ಹಾರೈಸಿದರು.

 ತಾ.ಪಂ ಸದಸ್ಯರಾದ ವಾಸುದೇವ ಪೈ, ಉದ್ಯಮಿ ಶ್ರೀಕಾಂತ ನಾಯಕ, ಗ್ರಾ.ಪಂ ಉಪಾಧ್ಯಕ್ಷರಾದ ಶ್ರೀ ಭರತ ಕಾಮತ್, ಸ.ಹಿ.ಪ್ರಾ ಶಾಲೆ ಸಿದ್ಧಾಪುರ ಇದರ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಸುಧಾಕರ ಶೆಟ್ಟಿ, ಉಭಯ ಶಾಲೆಗಳ ಮುಖ್ಯ ಶಿಕ್ಷಕರಾದ ಶ್ರೀ ಶೈಲೇಂದ್ರನಾಥ ಮತ್ತು ಶ್ರೀ ನರಸಿಂಹ ನಾಯ್ಕ್  ಉಪಸ್ಥಿತರಿದ್ದರು.
ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಶ್ರೀಮತಿ ವಸಂತಿ ಎಲ್ಲರನ್ನೂ ಸ್ವಾಗತಿಸಿದರು, ಕಾರ್ಯಕ್ರಮಾಧಿಕಾರಿ ಶ್ರೀ ರಮಾನಂದ ನಾಯಕ, ಶಿರಗುಂಜಿ ಪ್ರಾಸ್ಥಾವಿಕ ನುಡಿಗಳನ್ನಾಡಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ರವೀಂದ್ರ ಶೆಟ್ಟಿ ಎಲ್ಲರಿಗೂ ವಂದಿಸಿದರು.

Monday 2 March 2020

ಓಡುವ ನೀರನ್ನು ಇಂಗುವಂತೆ ಮಾಡಿ

   ಜಲವಿಲ್ಲದ ಜಾಗವಿಲ್ಲ. ಜೀವ ಜಲವಾಗಿರುವ ನೀರು ಪ್ರಕೃತಿಯು ಮನುಷ್ಯ ಹಾಗೂ ಪ್ರಾಣಿ ಪಕ್ಷಿಗಳಿಗೆ ಇತ್ತ ವರ. ಇದು ಸೃಷ್ಟಿಸಲಾದ ನೈಸರ್ಗಿಕ ಸಂಪತ್ತು. ನೀರಿಗೆ ನೀರೇ ಪರ್ಯಾಯ. ಮಳೆ ಇದಕ್ಕೆ ಮೂಲಾಧಾರ. ಅಮೃತ ಸ್ವರೂಪವಾದ ನೀರು ಜೀವ ಸಂಕುಲಕ್ಕೆ ಆಧಾರ ಎಂದು ಹಿರಿಯ ಭೂವಿಜ್ಞಾನಿ ಡಾ| ಎಂ. ದಿನಕರ ಶೆಟ್ಟಿ ಅವರು ಹೇಳಿದರು. ಅವರು ಅಂತರ್ಜಲ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾ ಅಂತರ್ಜಲ ಕಚೇರಿ ಉಡುಪಿ ಇವರ ಸಹಯೋಗದೊಂದಿಗೆ ಸರಕಾರಿ ಪ್ರೌಢಶಾಲೆ ಸಿದ್ದಾಪುರ ಇವರ ಸಹಕಾರದೊಂದಿಗೆ ಸಿದ್ದಾಪುರ ಸರಕಾರಿ ಪ್ರೌಢಶಾಲೆಯಲ್ಲಿ ಜರಗಿದ ಅಂತರ್ಜಲ ವಿದ್ಯಾರ್ಥಿ ಜಾಗೃತಿ ಶಿಬಿರ ಹಾಗೂ ಜಾಗೃತಿ ಜಾಥಾದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾರ್ವತ್ರಿಕ ದ್ರಾವಕವಾದ ನೀರು ಘನ, ದ್ರವ ಮತ್ತು ಅನಿಲ ರೂಪದಲ್ಲಿದೆ. ಜಲಚಕ್ರದ ಮುಖೇನ ಭೂಮೇಲ್ಮೆ ೃನ ನೀರು ಸೂರ್ಯನ ಶಾಖದಿಂದ ಆವಿಯಾಗಿ, ಮೋಡವಾಗಿ ಮೋಡದಿಂದ ಮಳೆಯ ರೂಪದಲ್ಲಿ ಭೂಮಿಗೆ ಬೀಳುತ್ತದೆ. ಭೂಮಿಯ ಗುರುತ್ವಾಕರ್ಷಣೆ ಶಕ್ತಿಯಿಂದ ಸುಮಾರು ಶೇ. 10 ಮಳೆಯ ನೀರು ಭೂಮಿಯಲ್ಲಿ ಇಂಗಿ ಮಣ್ಣಿನ ಪದರಗಳ ಮೂಲಕ ಭೂಮಿಯ ಒಳಗೆ ಜಿನಿಗುತ್ತದೆ. ಇದಕ್ಕೆ ಅಂತರ್ಜಲ ಎನ್ನುತ್ತಾರೆ. ಒಂದು ಪ್ರದೇಶದ ಅಂತರ್ಜಲದ ಲಭ್ಯತೆ ಹಾಗೂ ಪ್ರಮಾಣವು ಪ್ರದೇಶದ ಮಳೆ, ವಾತಾವರಣ ಮತ್ತು ಶಿಲಾ ರಚನೆಯ ಮೇಲೆ ಆವಲಂಬಿತವಾಗಿರುತ್ತವೆ ಎಂದರು.
ರಾಜ್ಯ ಸಂಪನ್ಮೂಲ ವ್ಯಕ್ತಿ ಹಾಗೂ ತರಬೇತಿದಾರ ರತ್ನಶ್ರೀ ಜೋಸೆಫ್ಜಿ.ಎಂ. ರೆಬೆಲ್ಲೋ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾಹಿತಿ ನೀಡಿ ಮಾತನಾಡಿ, ನೀರು ಜೀವಜಲ. ಸಕಲ ಜೀವರಾಶಿಗಳಿಗೂ ಜಲವೇ ಮೂಲ. ಇದು ಪ್ರಕೃತಿಯ ಅತ್ಯಮೂಲ್ಯ ಕೊಡುಗೆ ಇದರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. ಜಿ.ಪಂ. ಸದಸ್ಯ ರೋಹಿತ್ಕುಮಾರ್ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ, ಶುಭಹಾರೈಸಿದರು. ತಾಲೂಕು ಪಂಚಾಯತ್ಸದಸ್ಯ ಎಸ್‌.ಕೆ. ವಾಸುದೇವ ಪೈ ಕಿರು ಹೊತ್ತಗೆ ಬಿಡುಗಡೆ ಮಾಡಿದರು. ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷೆ ಸರೋಜಿನಿ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಸಂದರ್ಭದಲ್ಲಿ ಅಂತರ್ಜಲ ವಿದ್ಯಾರ್ಥಿ ಜಾಗೃತಿ ಶಿಬಿರ ಜಾಥಾವು ಸಿದ್ದಾಪುರ ಸರಕಾರಿ ಪ್ರೌಢಶಾಲೆಯಿಂದ ಹೊರಟು, ಸಿದ್ದಾಪುರ ಪೇಟೆ ಮೂಲಕ ಸಾಗಿ ಪ್ರೌಢಶಾಲೆಯಲ್ಲಿ ಸಮಾಪ್ತಿಗೊಂಡಿತು. ಜಾಗೃತಿ ಜಾಥದಲ್ಲಿ ಶಾಲಾಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಶಿಕ್ಷಕರು ಹಾಗೂ ಸಿಬಂದಿ, ವಿದ್ಯಾರ್ಥಿಗಳು, ಹೆತ್ತವರು ಭಾಗವಹಿಸಿದರು. ಜಾಗೃತಿ ಶಿಬಿರದ ಅಂಗವಾಗಿ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮುಖ್ಯ ಶಿಕ್ಷಕ ಶೈಲೇಂದ್ರನಾಥ್ಕೆ.ಎನ್‌. ಸ್ವಾಗತಿಸಿದರು. ಹಿರಿಯ ಭೂವಿಜ್ಞಾನಿ ಡಾ| ಎಂ. ದಿನಕರ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಉದಯ ಗಾಂವಕಾರ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಸನತ್ಶೆಟ್ಟಿ ಬಹುಮಾನ ಪಟ್ಟಿ ವಾಚಿಸಿದರು. ಶಿಕ್ಷಕ ರಮಾನಂದ ನಾಯ್ಕ ವಂದಿಸಿದರು.

ಓಡುವ ನೀರನ್ನು ಇಂಗುವಂತೆ ಮಾಡಿ
ಮಳೆ ಕಡಿಮೆಯಾದ ಹಾಗೆಯೇ ನೀರಿನ ಪ್ರಮಾಣ ಕೂಡ ಕಡಿಮೆಯಾಗುತ್ತಿವೆ. ಹಿಂದಿನ ಕಾಲದಲ್ಲಿ ನೀರು ಧಾರಾಳವಾಗಿ ಸಿಗುತ್ತಿತ್ತು. ಆಧುನಿಕತೆ ಮುಂದುವರಿದಂತೆ ಕಾಡುಗಳು, ಗುಡ್ಡ-ಬೆಟ್ಟಗಳನ್ನು ನಾಶಗೊಳಿಸಿದ ಪರಿಣಾಮ ಮಳೆ ಕಡಿಮೆಯಾಗುತ್ತಿದೆ. ಮಳೆ ಬಂದರೂ ನೀರು ಇಂಗುತ್ತಿಲ್ಲ. ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯನ್ನು ಮಣ್ಣು ಹೊಂದಿಲ್ಲ. ಸರಾಗವಾಗಿ ಓಡುವ ನೀರಿಗೆ ಅಲ್ಲಲ್ಲಿ ಒಡ್ಡುಗಳನ್ನು ನಿರ್ಮಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದು ನಮ್ಮ ಕೈಯಲ್ಲಿದೆ. ಅಮೃತ ಸ್ವರೂಪವಾದ ನೀರಿನ ಬಳಕೆಯಲ್ಲಿಯೂ ಮಿತಿ ಅತ್ಯಗತ್ಯವಾಗಿದೆ.
-ಡಾ| ಎಂ. ದಿನಕರ ಶೆಟ್ಟಿ, ಹಿರಿಯ ಭೂವಿಜ್ಞಾನಿ

ನೀರನ್ನು ಸಂರಕ್ಷಿಸಿ
ನೀರು ಇರದಿದ್ದರೆ ಜೀವ ಜಗತ್ತು ಇರಲು ಸಾಧ್ಯವಿರುತ್ತಿರಲಿಲ್ಲ. ಭೂಮಿಯ ಮುಕ್ಕಾಲು ಪಾಲು ನೀರಿನಿಂದ ಆವರಿಸಲ್ಪಟ್ಟಿದೆ. ಭೂಮಿಯಲ್ಲಿರುವ ಎಲ್ಲ ನೀರು ಕುಡಿಯಲು ಯೋಗ್ಯವಾಗಿಲ್ಲ. ಭೂಮಿಯಲ್ಲಿ ದೊರಕುವ ಒಟ್ಟು ಶೇ.97 ಭಾಗ ಸಮುದ್ರದಲ್ಲಿದೆ. ಆದರೆ ಅದು ಉಪ್ಪು ನೀರು. 3 ಶೇ. ಮಾತ್ರ ಸಿಹಿ ತೀರು. ಇದು ಧ್ರುವ ಪ್ರದೇಶದಲ್ಲಿ ಮಂಜಿನ ರೂಪದಲ್ಲಿ ಭೂಮಿಯ ಒಳಗೆ ಅಂತರ್ಜಲ ವಾಗಿ ವಾತಾವರಣದಲ್ಲಿ ಆವಿಯ ರೂಪದಲ್ಲಿ ಹಾಗೂ ಭೂಮಿಯ ಮೇಲ್ಭಾಗದಲ್ಲಿ ಕೆರೆ. ಕೊಳ, ತೊರೆ, ನದಿ, ಸರೋವರಗಳಲ್ಲಿ ದ್ರವ ರೂಪದಲ್ಲಿ ಹಂಚಿಹೋಗಿದೆ. ನೀರನ್ನು ಸಂರಕ್ಷಿಸದಿದ್ದಲ್ಲಿ ಮನುಕುಲ ನಾಶವಾಗುತ್ತದೆ.
-ರತ್ನಶ್ರೀ ಜೋಸೆಫ್ಜಿ.ಎಂ. ರೆಬೆಲ್ಲೋ
click here