Friday 23 December 2022

ಗಣಿತ ದಿನ: ಪೋಷಕರೊಬ್ಬರ ಪ್ರತಿಕ್ರಿಯೆ

 

ಸಿದ್ದಾಪುರ ಪ್ರೌಢಶಾಲೆಯಲ್ಲಿ ನಡೆದ ಗಣಿತ ದಿನಾಚರಣೆಯ ಕುರಿತು ಶ್ರೀಮತಿ‌ ಪೂರ್ಣಿಮಾ ಕಮಲಶಿಲೆ ತಮ್ಮ ಫೇಸ್‌ಬುಕ್‌ ಗೋಡೆಯ ಮೇಲೆ ಹಂಚಿಕೊಂಡ ಬರೆಹವಿದು.

---------------------------








---------------------------


ತರಗತಿಯೊಳಗಿನ ಕಲಿಕೆಗಿಂತ ತರಗತಿಯಾಚೆ ಕಲೆತು ಕಲಿಯುವುದು,ಸ್ಪರ್ಧೆ, ಪ್ರಯೋಗ, ಮಾದರಿ, ಚಿತ್ರಕಲೆ, ರಸಪ್ರಶ್ನೆ ಎಂದರೆ ಈ ವಿದ್ಯಾರ್ಥಿ ಗಡಣಕ್ಕೆ ನೂರಾನೆಯ ಉತ್ಸುಕತೆ.

ಇವತ್ತು ಗಣಿತ ದಿನವಂತೆ. ನನ್ನ ಮಗನ ಶಾಲೆಯಲ್ಲಿ ಎರಡು ದಿನಗಳಿಂದ ಮಕ್ಕಳೆಲ್ಲ ಅದೆಷ್ಟು ಚುರುಕಾಗಿ ಲವಲವಿಕೆಯಿಂದ ಈ ದಿನದ ಆಚರಣೆಗೆ ತಯಾರಿ ಮಾಡಿಕೊಂಡರು. ನಮ್ಮ ಸರಕಾರಿ ಶಾಲೆಗಳಲ್ಲಿ ಈಗ ಎಲ್ಲ ವಿಷಯಗಳಿಗೂ ಕ್ಲಬ್/ ಸಂಘಗಳಿವೆ. ವಿಷಯವಾರು ಶಿಕ್ಷಕರು ಬಹಳ ಕ್ರಿಯಾಶೀಲರಾಗಿ ಮಕ್ಕಳನ್ನು ಚಟುವಟಿಕೆಯಲ್ಲಿ ತೊಡಗುವಂತೆ ಪ್ರೇರೇಪಿಸುತ್ತಾರೆ.

ಮಕ್ಕಳೂ ಕೂಡ ಅಂಜಿಕೆ ಇಲ್ಲದೆ ಎಲ್ಲ ಚಟುವಟಿಕೆಗಳಲ್ಲಿ ನಾ ಮುಂದು ತಾ ಮುಂದು ಎಂದು ತೊಡಗಿಸಿಕೊಳ್ಳುತ್ತಾರೆ.

ಗಣಿತ ದಿನದ ಅಂಗವಾಗಿ ಗಣಿತದ ರಸಪ್ರಶ್ನೆ, ಗಣಿತದ ಮಾದರಿಗಳ ತಯಾರಿ, ಗಣಿತಜ್ಞರ ಚಿತ್ರ ಬಿಡಿಸುವ ಸ್ಪರ್ಧೆ ಹಮ್ಮಿಕೊಂಡಿದ್ದಾರೆ ಎಂದು ನನ್ನ ಮಗ ನಿನ್ನೆ ಶಾಲೆಯಿಂದ ಬಂದವನೆ ವರದಿ ಒಪ್ಪಿಸಿದ್ದ.






ರಸಪ್ರಶ್ನೆ ಸ್ಪರ್ಧೆ ನಿನ್ನೆಯೆ ನಡೆಸಿದರಂತೆ, ಇಂದು ವಿದ್ಯಾರ್ಥಿ ಗಳು ಬಿಡಿಸಿದ ಚಿತ್ರಗಳು ಮತ್ತು ಗಣಿತ ಮಾದರಿಗಳ ಪ್ರದರ್ಶನ ಮತ್ತು ಸ್ಪರ್ಧೆ ನಡೆಯಿತು. ಜೊತೆಗೆ ಸಭಾ ಕಾರ್ಯಕ್ರಮ ಆಯೋಜಿಸಿ ಗಣಿತ ಶಿಕ್ಷಕರು ,ವಿಜ್ಞಾನ ಶಿಕ್ಷಕರು ಗಣಿತದ ಗಂಭೀರತೆ,ನಿಖರತೆ, ಮೋಜು, ಚುರುಕುಗಳ ಕುರಿತು ತಿಳಿಸುವುದರ ಜೊತೆಜೊತೆಗೆ ರಾಮಾನುಜಂ, ಹಾರ್ಡಿಯವರ ಕುರಿತು ಒಂದಿಷ್ಟು ವಿಷಯಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು. ಕೆಲವು ವಿದ್ಯಾರ್ಥಿಗಳು ಗಣಿತದ ಕುರಿತು ಅವರ ಅರಿವನ್ನು ಮಾತಿನ ಮೂಲಕ ತೆರೆದಿಟ್ಟರು. ಸ್ಪರ್ಧೆಯಲ್ಲಿ ವಿಜೇಯರಾದವರಿಗೆ ಬಹುಮಾನ ವಿತರಣೆ ನಡೆಯಿತು.

ಹೀಗೆ ಗಣಿತ ದಿನ ಲೆಕ್ಕಕ್ಕೊಂದು ದಿನವಾಗಲಿಲ್ಲ. ಲೆಕ್ಕದ ಹಬ್ಬವೇ ಆಯಿತು ಎಂದು ಮಗ ಸಂತಸದಿಂದ ವರದಿ ನೀಡಿದ.

ನಾವೆಲ್ಲ ಇಪ್ಪತ್ತೈದು ವರ್ಷದ ಹಿಂದೆ ಕಲಿತ ಸರಕಾರಿ ಶಾಲೆಗೂ ,ಈಗ  ಇರುವ ಸರಕಾರಿ ಶಾಲೆಗೂ ಇರುವ ಅಜಗಜಾಂತರ ಹೊಟ್ಟೆ ಉರಿಸಿತು. ನಾನೂ ಈಗ ಸರಕಾರಿ ಶಾಲೆಯ ವಿದ್ಯಾರ್ಥಿ ಆಗಿರಬೇಕಿತ್ತು ಎಂದು ಮನ ಮತ್ತೆ ಮತ್ತೆ ಕೂಗಿತು.

ಅನುಭವಿ ಮತ್ತು ಉತ್ಸಾಹಿ ಶಿಕ್ಷಕರು ಸರಕಾರಿ ಶಾಲೆಯ ಜೀವಾಳ. ಅಂತಹ  ಶಿಕ್ಷಕರ ತಂಡ ನಮ್ಮ ಸರಕಾರಿ ಪ್ರೌಢ ಶಾಲೆ ಸಿದ್ಧಾಪುರ ,ಕುಂದಾಪುರ ತಾಲೂಕು,ಉಡುಪಿ ಜಿಲ್ಲೆಯಲ್ಲಿ ಇರುವುದು ಈ ಭಾಗದ ವಿದ್ಯಾರ್ಥಿಗಳ ಸೌಭಾಗ್ಯ. ಊರಿನವರಿಗೆ, ಪೋಷಕರಿಗೆ ಇದು  ಹೆಮ್ಮೆಯ ಸಂಗತಿ.

ಗಣಿತ ದಿನ ಆಯೋಜಿಸಿದ ಶಿಕ್ಷಕರ ತಂಡಕ್ಕೆ ಕೃತಜ್ಞತೆಗಳು.


ಪೂರ್ಣಿಮಾ ಕಮಲಶಿಲೆ.

-----------------------------

ಈ ಸುದ್ದಿಯನ್ನೂ ಓದಿ:

ಸಿದ್ಧಾಪುರ ಹೈಸ್ಕೂಲಿನಲ್ಲಿ ಗಣಿತ ದಿನಾಚರಣೆ



ಸಿದ್ಧಾಪುರ ಹೈಸ್ಕೂಲಿನಲ್ಲಿ ಗಣಿತ ದಿನಾಚರಣೆ

 


   

ಎಲ್ಲ ವಿಷಯಗಳ ತಾಯಿ ಗಣಿತ ಶಾಸ್ತ್ರ. ದೈನಂದಿನ ವ್ಯವಹಾರದಲ್ಲಿ ಗಣಿತವನ್ನು ತಿಳಿದವರು ಮಾತ್ರ ಜೀವನದಲ್ಲಿ  ಸೋಲನ್ನು ಮೆಟ್ಟಿ ನಿಲ್ಲಬಲ್ಲರು. ವಿಶ್ವಶ್ರೇಷ್ಠ  ಗಣಿತಜ್ಞರಲ್ಲಿ ಶ್ರೀನಿವಾಸನ್ ರಾಮಾನುಜಮ್ ಅಗ್ರಗಣ್ಯರು ಎಂದು ಸಿದ್ದಾಪುರ ಸರಕಾರಿ ಪ್ರೌಢಶಾಲೆಯ ಗಣಿತ ಅಧ್ಯಾಪಕ ನಾಗರಾಜ್ ಶೆಟ್ಟಿ ಪ್ರತಿಪಾದಿಸಿದರು. ಅವರು ಸಂಸ್ಥೆಯಲ್ಲಿ ಆಯೋಜಿಸಿದ ಗಣಿತ ದಿನಾಚರಣೆಯ ಪ್ರಧಾನ ಭಾಷಣ ಮಾಡಿದರು.

---------------------------------------------------

ಗಣಿತ ಬಲ್ಲವ ಜಗ ಗೆಲ್ಲಬಲ್ಲ


ನಾಗರಾಜ್ ಶೆಟ್ಟಿ, 

ಗಣಿತ ಶಿಕ್ಷಕರು

-------------------------------------------------

ಅಧ್ಯಾಪಕ ಉದಯ ಗಾಂವಕಾರ ಮಾತನಾಡುತ್ತ ಕೇವಲ ಮನುಷ್ಯರು ಮಾತ್ರವಲ್ಲ ಪ್ರಕೃತಿಯ ಪ್ರಾಣಿ ಪಕ್ಷಿಗಳು ಕೂಡ ಲೆಕ್ಕ ಹಾಕಿಯೇ ಜೀವನ ಮಾಡುತ್ತವೆ.ಲೆಕ್ಕ ಮರೆತ ಜಗತ್ತು ಬಾಳುವುದು ಕಷ್ಟಸಾಧ್ಯ ಎಂದು ಅಭಿಮತಿಸಿದರು. ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಗಣಿತ ರಸಪ್ರಶ್ನೆ, ಗಣಿತ ಮಾದರಿ ತಯಾರಿಕೆ ಮತ್ತು ಗಣಿತಜ್ಞರ ಭಾವಚಿತ್ರ ರಚನಾ ಸ್ಪರ್ಧೆ ಏರ್ಪಡಿಸಿ ವಿಜೇತರನ್ನು ಪುರಸ್ಕರಿಸಲಾಯಿತು. 


ವಿಶ್ವ ಕಂಡ ಶ್ರೇಷ್ಠ ಗಣಿತಜ್ಞ ರಾಮಾನುಜಂ ಎಂಬ ವಿಷಯದ ಬಗ್ಗೆ ಕುಮಾರಿ ಶ್ರೀನಿಧಿ  ಜಿ. ಹಾಗೂ ಬ್ರಾಹ್ಮೀಶ್ರೀ ಮಾತನ್ನಾಡಿದರು. ಏರ್ಪಡಿಸಿದ್ದ ಗಣಿತ ಮಾದರಿಗಳ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಸಂಸ್ಥೆಯ ಮುಖ್ಯಸ್ಥರಾದ ಚಂದ್ರ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು.







 ಗಣಿತ ಶಿಕ್ಷಕ ಉದಯ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದಯ ಬಳೆಗಾರ ಸರ್ವರನ್ನು ಸ್ವಾಗತಿಸಿದರು. ಪೂರ್ಣಿಮಾ ಭಟ್ ವಂದಿಸಿದರು. ಹರ್ಷಿನಿ ತಂಡದವರು ಪ್ರಾರ್ಥಿಸಿದರು. ಕುಮಾರ್ ಜ್ಞಾನ ಪುತ್ರನ್ ಮತ್ತು ಶ್ರೀಶಾಂತ್ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ಶಿಕ್ಷಕ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ:

ಗಣಿತ ದಿನ: ಬರೆಹಗಾರ್ತಿ ಪೂರ್ಣಿಮಾ ಕಮಲಶಿಲೆಯವರ ಪ್ರತಿಕ್ರಿಯೆ

ಪೂರ್ಣಿಮಾ ಕಮಲಶಿಲೆ





---------------------------------------

ಚಿತ್ರ ಸಂಪುಟ

*ಚಿತ್ರ ರಚನಾ ಸ್ಪರ್ಧೆ

ವಿಜೇತರಿಗೆ ಬಹುಮಾನ
ಮಾದರಿ ರಚನಾ ಸ್ಪರ್ಧೆ

-------------------------------------------

( ಬರೆಹ: ರಮಾನಂದ ನಾಯಕ, ಕನ್ನಡ ಭಾಷಾ ಶಿಕ್ಷಕರು)