Showing posts with label ಸಾಧನೆ. Show all posts
Showing posts with label ಸಾಧನೆ. Show all posts

Thursday, 19 January 2023

ಸಿದ್ಧಾಪುರ ಪ್ರೌಢಶಾಲೆಯ ಶ್ರೀನಿಧಿ ರಾಷ್ಟ್ರಮಟ್ಟದ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಆಯ್ಕೆ

 


30ನೇ ಅಖಿಲ ಕರ್ನಾಟಕ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಿದ ಕುಂದಾಪುರ ತಾಲೂಕಿನ ಸಿದ್ಧಾಪುರ ಪ್ರೌಢಶಾಲೆಯ  ಶ್ರೀನಿಧಿ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.  "ಆರೋಗ್ಯ ಮತ್ತು ಯೋಗಕ್ಷೇಮಕಾಗಿ ಜೀವಿ ಪರಿಸರ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳೋಣ" ಎಂಬ ಮುಖ್ಯವಿಷಯದ ಮೇಲೆ ಈ ಬಾರಿಯ ಸಮಾವೇಶ ನಡೆಯುತ್ತಿದೆ. ಪರಿಸರ ವ್ಯವಸ್ಥೆ ಮತ್ತು ಆರೋಗ್ಯಕ್ಕಾಗಿ ತಾಂತ್ರಿಕ ನಾವಿನ್ಯತೆ ಎಂಬ ಉಪವಿಷಯವನ್ನು ಆಧರಿಸಿ ಶ್ರೀನಿಧಿ "ಗ್ರಾಮೀಣ ಜನರ ಚಿತ್ತ ಕಾಂಕ್ರೀಟೀಕರಣ ದತ್ತ" ಎಂಬ ಅಧ್ಯಯನವನ್ನು ನಡೆಸಿದ್ದಳು.



 ಶಾಲೆಯ ವಿಜ್ಞಾನ ಶಿಕ್ಷಕಿ ಶ್ರೀಮತಿ ಪೂರ್ಣಿಮಾ ವಿ ಭಟ್ ರವರ ಮಾರ್ಗದರ್ಶನದಲ್ಲಿ ನಡೆದ ಈ ಅಧ್ಯಯನವನ್ನು ತನ್ನ ತರಗತಿಯ ಸಹಪಾಠಿ ರಚನಾಳ ಜೊತೆಗೂಡಿ ನಡೆಸಿದ್ದಳು.



 ಮನೆಯಂಗಳಕ್ಕೆ ಬಳಸುವ ಇಂಟರ್ ಲಾಕ್ ಗಳಲ್ಲಿ ಅಗತ್ಯ ತಾಂತ್ರಿಕ ಬದಲಾವಣೆ ಮಾಡಿಕೊಳ್ಳುವ ಮೂಲಕ  ಹರಿದುಹೋಗಬಹುದಾದ ಮಳೆನೀರನ್ನು ಅಂತರ್ಜಲದ ಭಂಡಾರಕ್ಕೆ ಸೇರಿಸಬಹುದು ಎಂಬ ಸಲಹೆಯೂ ಈ ಅಧ್ಯಯನ ಒಳಗೊಂಡಿದೆ. ಈ ಅಧ್ಯಯನವನ್ನು ಪರಿಣಾಮಕಾರಿಯಾಗಿ ಮಂಡಿಸಿದ ಕುಮಾರಿ‌ ಶ್ರೀನಿಧಿ ತೀರ್ಪುಗಾರರ ಪ್ರಶ್ನೆಗಳಿಗೆ ಅತ್ಯುತ್ತಮವಾಗಿ ಉತ್ತರಿಸಿ ರಾಷ್ಟ ಮಟ್ಟದ ಸಮಾವೇಶಕ್ಕೆ ಆಯ್ಕೆಯಾಗಿದ್ದಾಳೆ. ಆಜ್ರಿ ಯಡೂರಿನ ಶ್ರೀ ಗೋಕುಲಾನಂದ ಮತ್ತು ಶ್ರೀಮತಿ ಸುಮಿತ್ರಾರವರ ಮಗಳಾದ ಶ್ರೀನಿಧಿ ಕಲಿಕೆ ಮತ್ತು ಸಾಂಸ್ಕೃತಿಕ ರಂಗಗಳೆರಡರಲ್ಲೂ ತನ್ನ ಛಾಪು ಮೂಡಿಸಿರುವ ಶಾಲೆಯ ಹೆಮ್ಮೆಯ ವಿದ್ಯಾರ್ಥಿನಿ. ಇದೀಗ ಯುವ ವಿಜ್ಞಾನಿಯಾಗಿಯೂ ಆಕೆ ಗುರುತಿಸಲ್ಪಟ್ಟಿರುವುದಕ್ಕಾಗಿ ಶಾಲೆಯ ಮುಖ್ಯಶಿಕ್ಷಕರು, ಶಿಕ್ಷಕ ವೃಂದ ಹಾಗೂ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು, ಸದಸ್ಯರು ಅಭಿನಂದಿಸಿದ್ದಾರೆ.

Saturday, 18 June 2022

ಪ್ರಜಾಪ್ರಭುತ್ವದ ಪಾಠ ಹೇಳುವ ಶಾಲಾಚುನಾವಣೆ

ಸಿದ್ಧಾಪುರದ ಸರ್ಕಾರಿ ಪ್ರೌಢಶಾಲೆಯು ಅತ್ಯಂತ ಹೆಚ್ಚು ಮಕ್ಕಳಿರುವ ಸರ್ಕಾರಿ ಶಾಲೆ. ಈ ಶಾಲೆಯ 642 ಮಕ್ಕಳಲ್ಲಿ 611 ವಿದ್ಯಾರ್ಥಿಗಳು ಇಂದು ಶಾಲಾ ಸಂಸತ್ತಿಗಾಗಿ ನಡೆದ  ಮಾದರಿ ಮತದಾನದಲ್ಲಿ ಮತ ಚಲಾಯಿಸಿ ಪ್ರಜಾಪ್ರಭುತ್ವದ ಮೊದಲ ಪಾಠ ಪಡೆದರು.

ಶಾಲಾ ಸಂಸತ್ತು ಪ್ರಜಾಪ್ರಭುತ್ವದ ಆಚರಣೆಯ ಜೊತೆ ಪ್ರಜಾಪ್ರಭುತ್ವದ ಮೌಲ್ಯ ಮತ್ತು ಸಂಸ್ಕಾರವನ್ನು ಮಕ್ಕಳಿಗೆ ಎಳವೆಯಲ್ಲೇ ತಿಳಿಸುತ್ತದೆ. ಭಿನ್ನಾಭಿಪ್ರಾಯವನ್ನು ಗೌರವಿಸುವುದು, ಬಹುಮತದ ತೀರ್ಮಾನಕ್ಕೆ ಬದ್ಧರಾಗುವುದು, ಅಧಿಕಾರವನ್ನು ಪ್ರಶ್ನಿಸುವುದು, ಸಂವಿಧಾನದಲ್ಲಿ ನಂಬಿಕೆಯಿಡುವುದು ಇತ್ಯಾದಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ರೂಪಿಸುತ್ತದೆ. ನಾಯಕತ್ವದ ಗುಣಗಳನ್ನು ಅಭಿವೃದ್ಧಿಪಡಿಸುವಲ್ಲಿ ನೆರವಾಗುತ್ತದೆ.


ಇಂದಿನ ವಿದ್ಯಾರ್ಥಿ ಸಂಸತ್ ಚುನಾವಣೆಯನ್ನು ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿ ನಡೆಸಲಾಯಿತು. ಇವಿಎಂ ಆ್ಯಪ್ ಮೂಲಕ 6  ಬೂತ್‌ಗಳಲ್ಲಿ  ವಿದ್ಯಾರ್ಥಿಗಳು ಮತ ಚಲಾಯಿಸಿದರು. 

ವಿದ್ಯಾರ್ಥಿ ಉಪನಾಯಕ/ ಉಪನಾಯಕಿ ಚುನಾವಣಾ ಇ-ಬ್ಯಾಲೆಟ್

 


ವಿದ್ಯಾರ್ಥಿ ನಾಯಕ/ ನಾಯಕಿ ಚುನಾವಣೆಯ ಇ-ಬ್ಯಾಲೆಟ್




ಶಾಲಾ ನಾಯಕ ಸ್ಥಾನಕ್ಕೆ ಮೂರು ಅಭ್ಯರ್ಥಿಗಳು, ಉಪನಾಯಕ ಸ್ಥಾನಕ್ಕೆ ಏಳು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮೂರು ಸುತ್ತುಗಳ ಮತ ಎಣಿಕೆಯ ತರುವಾಯ ಅಂತಿಮವಾಗಿ ✌
  • ಭರತ್ ಕುಮಾರ್ ಶಾಲಾ ನಾಯಕನಾಗಿ, 
  • ಅಶ್ವಿನ್ ಉಪನಾಯಕನಾಗಿ, 
  • ಸ್ಪಂದನಾ ಉಳ್ಳೂರು ಶಾಲಾ ಉಪನಾಯಕಿಯಾಗಿ ಆಯ್ಕೆಗೊಂಡರು.
ಭರತ್ ಕುಮಾರ್, ವಿದ್ಯಾರ್ಥಿ ನಾಯಕ

ಅಶ್ವಿನ್, ವಿದ್ಯಾರ್ಥಿ ಉಪನಾಯಕ

ಸ್ಪಂದನಾ ಉಳ್ಳೂರು,  ವಿದ್ಯಾರ್ಥಿ ಉಪನಾಯಕ

ಪ್ರಭಾರ ಮುಖ್ಯ ಶಿಕ್ಷಕ ಉದಯ ಗಾಂವಕಾರ ಮುಖ್ಯ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಶಿಕ್ಷಕ ವೃಂದ ಮತ್ತು ಸಿಬ್ಬಂದಿಗಳು ಮತಗಟ್ಟೆ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. ಶಿಕ್ಷಕ ನಾಗರಾಜ್ ಶೆಟ್ಟಿ, ಉದಯ್ ಕುಮಾರ್ ಮತಗಳ ಲೆಕ್ಕ ಪ್ರಕ್ರಿಯೆಯನ್ನು ನಡೆಸಿದರು. ಎನ್‌ಎಸ್‌ಎಸ್ ಸ್ವಯಂಸೇವಕರು ಭದ್ರತಾ ಸಿಬ್ಬಂದಿಗಳಾಗಿ ಸಹಕರಿಸಿದರು.


ಮತದಾನ ಪ್ರಕ್ರಿಯೆಯ ಅಧಿಕೃತ ಆದೇಶದ ನಂತರ ಸ್ಪರ್ಧಿಗಳ ನಾಮಪತ್ರ ಸಲ್ಲಿಸುವಿಕೆ,  ಹಿಂತೆಗೆದುಕೊಳ್ಳುವಿಕೆ, ಚುನಾವಣಾ ಪ್ರಚಾರ ಇತ್ಯಾದಿ ಚುನಾವಣಾ ಪ್ರಕ್ರಿಯೆಗಳು ಸಹ ಸಾರ್ವತ್ರಿಕ ಚುನಾವಣೆಯ ರೀತಿಯಲ್ಲಿ ನಡೆದಿದ್ದವು.



ಮತ ಎಣಿಕೆಯ ನಂತರ ನಡೆದ ಸಭೆಯಲ್ಲಿ ಗ್ರಾ. ಪಂ. ಅಧ್ಯಕ್ಷರಾದ ಶೇಖರ್ ಕುಲಾಲ್  ವಿಜೇತರಿಗೆ ಅಧಿಕೃತ ಪ್ರಮಾಣ ಪತ್ರಗಳನ್ನು ವಿತರಿಸಿ ಶುಭ ಹಾರೈಸಿದರು.  ಗ್ರಾ. ಪಂ. ಸದಸ್ಯರಾದ ಭಾಸ್ಕರ ಶೆಟ್ಟಿ ಉಪಸ್ಥಿತರಿದ್ದರು. ರಾಘವೇಂದ್ರ ಚಾತ್ರಮಕ್ಕಿ ಕಾರ್ಯಕ್ರಮ ನಿರ್ವಹಿಸಿದರು.




Tuesday, 14 June 2022

ಹತ್ತನೇ ತರಗತಿ ಫಲಿತಾಂಶ: ಸಿದ್ಧಾಪುರ ಪ್ರೌಢಶಾಲೆಯ ಸಾಧನೆ

 2021-22 ನೇ ಸಾಲಿನ  ಎಸ್ ಎಸ್ ಎಲ್ ಸಿ ಪರೀಕ್ಷೆ ತೆಗೆದುಕೊಂಡ ಸಿದ್ಧಾಪುರ ಪ್ರೌಢಶಾಲೆ 195 ವಿದ್ಯಾರ್ಥಿಗಳಲ್ಲಿ  182 ವಿದ್ಯಾರ್ಥಿಗಳು ಪಾಸಾಗುವ ಮೂಲಕ 93.33ಶೇಖಡಾ ಉತ್ತೀರ್ಣತೆಯನ್ನು ದಾಖಲಿಸಿದೆ. ಕನ್ನಡ ಮಾಧ್ಯಮದ 86 ವಿದ್ಯಾರ್ಥಿಗಳಲ್ಲಿ 77 ವಿದ್ಯಾರ್ಥಿಗಳು ಪಾಸಾಗಿದ್ದರೆ ಇಂಗ್ಲೀಷ್ ಮಾಧ್ಯಮದ 109 ವಿದ್ಯಾರ್ಥಿಗಳಲ್ಲಿ 105 ವಿದ್ಯಾರ್ಥಿಗಳು ಪಾಸಾಗಿದ್ದಾರೆ. 

195 ವಿದ್ಯಾರ್ಥಿಗಳಲ್ಲಿ 68 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲೂ 92 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲೂ ಪಾಸಾಗಿದ್ದಾರೆ. 

ಶಾಲೆಯ ಕೀರ್ತಿಯನ್ನು ನಾಡಿಗೆಲ್ಲ ವ್ಯಾಪಿಸಲು ಕಾರಣರಾದ ವೈಷ್ಣವಿ, ರಿತಿಕಾ ಮತ್ತು ಸಮೀಕ್ಷಾ

625 ಅಂಕಗಳಿಗೆ ಎಲ್ಲ  625 ಅಂಕಗಳನ್ನು ಪಡೆದ  ವೈಷ್ಣವಿ , 624  ಅಂಕಗಳನ್ನು ಪಡೆದ ರಿತಿಕಾ ಮತ್ತು 621 ಅಂಕಗಳನ್ನು ಪಡೆದ ಸಮೀಕ್ಷಾ ಜೊತೆಯಲ್ಲಿ ಒಟ್ಟೂ 11 ವಿದ್ಯಾರ್ಥಿಗಳು 600 ಕ್ಕೂ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ.

  






Friday, 13 August 2021

ಎಸ್ಎಸ್ಎಲ್ ಸಿ ಫಲಿತಾಂಶ : ಸಿದ್ದಾಪುರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಉತ್ತಮ ಸಾಧನೆ



ಪ್ರತೀಕಾ 621
ತಾಲೂಕಿನಲ್ಲಿಯೇ ಅತಿ ಹೆಚ್ಚು ವಿದ್ಯಾರ್ಥಿಗಳಿರುವ ಸರ್ಕಾರಿ ಪ್ರೌಢಶಾಲೆಯಾಗಿರುವ ಸಿದ್ದಾಪುರ ಪ್ರೌಢಶಾಲೆಯ 207 ವಿದ್ಯಾರ್ಥಿಗಳು 2020 ನೇ ಸಾಲಿನ ಎಸ್ಎಸ್ಎಲ್ ಪರೀಕ್ಷೆಗೆ ಕುಳಿತುಕೊಂಡಿದ್ದರು. ಇವರಲ್ಲಿ 13 ವಿದ್ಯಾರ್ಥಿಗಳು ಆರು ನೂರಕ್ಕೂ ಹೆಚ್ಚು ಅಂಕ ಗಳಿಸಿದ್ದಾರೆ. 36 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲೂ 99 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲೂ ತೇರ್ಗಡೆಯಾಗಿರುತ್ತಾರೆ. 621 ಅಂಕಗಳಿಸಿದ ವಿದ್ಯಾರ್ಥಿನಿ ಪ್ರತೀಕ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದು 619 ಅಂಕಗಳಿಸಿದ ವಿದ್ಯಾರ್ಥಿನಿ ಚಂದ್ರ ಕೆಎಸ್ ಹಾಗೂ 618 ಅಂಕಗಳಿಸಿದ ಸೃಜನ್ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದ್ದಾರೆ. ಉತ್ತಮ ಫಲಿತಾಂಶ ದಾಖಲಿಸಿರುವುದಕ್ಕಾಗಿ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಎಸ್ ಡಿ ಎಮ್ ಸಿ ಯ ಸರ್ವ ಸದಸ್ಯರು ಎಲ್ಲ ವಿದ್ಯಾರ್ಥಿಗಳನ್ನು ಹಾಗೂ ಅಧ್ಯಾಪಕ ವೃಂದವನ್ನು ಅಭಿನಂದಿಸಿದ್ದಾರೆ.


600 ಕ್ಕೂ ಹೆಚ್ಚು ಅಂಕ ಪಡೆದ  ವಿದ್ಯಾರ್ಥಿಗಳು
ಪ್ರತೀಕ 621 | ಚಂದ್ರಾ ಕೆ.ಎಸ್ 619 | ಸೃಜನ್ 618 | ಧನ್ಯ 617 | ಪ್ರಗತಿ 617 | ಸನ್ಮತಿ 617 | ರಜತ್ 606 |ಅನುರಾದ 605 | ಸಾಕ್ಷಿ 604 | ಸಂಜನಾ 603 | ಸುಶಾಂತ್ 603 | ಶ್ರೀರಕ್ಷಾ 603| ಶರಣ್ಯ 601 |
ಕನ್ನಡ ಮಾಧ್ಯಮದಲ್ಲಿ ಪ್ರಥಮ-ಪ್ರಥ್ವಿ 581




Monday, 11 January 2021

2020: ಶಾಲೆಗೆ ಕೀರ್ತಿ ತಂದ ಪ್ರಶಾಂತ ಮತ್ತು ಧನ್ಯಶ್ರಿ

 2020 ರ ಮಾರ್ಚ್ ನಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆ ತೆಗೆದುಕೊಂಡ ನಮ್ಮ ಶಾಲೆಯ 148 ವಿದ್ಯಾರ್ಥಿಗಳಲ್ಲಿ 139 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇಖಡಾ 94 ಉತ್ತೀರ್ಣತೆ ಸಾಧಿಸಿದ್ದಾರೆ. ಈ ಬಾರಿಯೂ ಇಂಗ್ಲೀಷ್ ಮಾಧ್ಯಮದಲ್ಲಿ ಶಾಲೆ ಶೇಖಡಾ 100 ಫಲಿತಾಂಶ ಪಡೆದಿದೆ. 625 ರಲ್ಲಿ 615 ಅಂಕಗಳನ್ನು ಗಳಿಸಿರುವ ಪ್ರಶಾಂತ್ ಮತ್ತು 614 ಅಂಕಗಳನ್ನು ಗಳಿಸಿರುವ ಧನ್ಯಶ್ರೀ ಸರಕಾರ ಪ್ರತಿ ತಾಲೂಕಿಗೆ ಕೊಡಮಾಡುವ ಮೂರು ಲ್ಯಾಪ್ ಟಾಪ್ ಗಳಲ್ಲಿ ಎರಡನ್ನು ಪಡೆದುಕೊಂಡಿದ್ದಾರೆ. 



 









Wednesday, 26 February 2020

ಅದಿತಿ ಎಸ್ ಕುಲಕರ್ಣಿ -ಎಸ್ ಎಸ್ ಎಲ್ ಸಿ ಯಲ್ಲಿ ಕರ್ನಾಟಕ್ಕೆ ತೃತೀಯ


   
ಚಿಕ್ಕಂದಿನಿಂದಲೂ ಸಿದ್ಧಾಪುರ ಹೊಸಂಗಡಿ ಪರಿಸರದಲ್ಲಿ ಓದಿಕೊಂಡು ಬಂದ ನಮ್ಮ ಅದಿತಿ ಎಸ್ ಕುಲಕರ್ಣಿ
ಇವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಕೆ ಪಿ ಸಿ ಎಲ್ ಆಂಗ್ಲ ಮಾಧ್ಯಮ ಶಾಲೆಯಲ್ಲೂ ಪ್ರೌಢಶಿಕ್ಷಣವನ್ನು 8ರಿಂದ 10ನೇ ತರಗತಿಯವರೆಗೆ ನಮ್ಮ ಸರಕಾರಿ ಪ್ರೌಢಶಾಲೆಯಲ್ಲಿ ಮುಗಿಸಿರುತ್ತಾರೆ.
ತನ್ನ ಅಸಾಧಾರಣ ಬುದ್ಧಿಶಕ್ತಿಯಿಂದ 623/625 ಅಂಕಗಳನ್ನು ಪಡೆದ ಇವರು ಕ್ರಮವಾಗಿ ಕನ್ನಡ – 125, ಇಂಗ್ಲೀಷ್ – 98, ಹಿಂದಿ - 100, ಗಣಿತ – 100,  ವಿಜ್ಞಾನ – 100, ಹಾಗೂ ಸಮಾಜ ವಿಜ್ಞಾನ – 100 ಅಂಕಗಳೊಂದಿಗೆ ತೇರ್ಗಡೆ ಹೊಂದಿ ಕರ್ನಾಟಕ ರಾಜ್ಯಕ್ಕೆ ತೃತೀಯಾ ರ್ಯಾಂಕ್ ಬಂದಿರುತ್ತಾರೆ.
ಇಂದು ಸರಕಾರಿ ಶಾಲೆಯೆಂದರೆ ಸದಾ ಮೂಗು ಮುರಿಯುತ್ತಿರುವ ಈ ಕಾಲ ಘಟ್ಟದಲ್ಲಿ ಇವರ ಹೆತ್ತವರು (ತಂದೆ ಶಶಿಕಾಂತ ಕುಲಕರ್ಣಿ ತಾಯಿ ಶ್ವೇತಾ ಕುಲಕರ್ಣಿ) ಕೆಪಿಸಿಎಲ್ ಹೊಸಂಗಡಿಯಲ್ಲಿ ಉನ್ನತ ಹುದ್ದೆಯಲ್ಲಿದ್ದರೂ (ಇಂಜಿನಿಯರ್) ತನ್ನ ಅದ್ವಿತೀಯ ಪ್ರತಿಭೆ ಹೊಂದಿರುವ ತನ್ನ ಮಗಳನ್ನು ಸರಕಾರಿ ಶಾಲೆಗೇ ಸೇರಿಸಬೇಕೆಂಬ ಇವರ ತೀರಾ ಇಚ್ಛಾ ಶಕ್ತಿ ಅವರ ಸರಳತನ ಮಾತ್ರವಲ್ಲ ಸರಕಾರಿ ಶಾಲೆಯ ಮೇಲಿಟ್ಟಿರುವ ಅಪಾರ ನಂಬಿಕೆ ಇಲ್ಲ್ಲಿ ವೇದ್ಯವಾಗುತ್ತದೆ.
ತರಗತಿಯಲ್ಲಿ ಸದಾ ಮುನ್ನಡೆ ಸಾಧಿಸುತ್ತಿರುವ ಕುಮಾರಿ ಅದಿತಿ ಎಸ್ ಕುಲಕರ್ಣಿಯವರು ಯಾವತ್ತೂ ತನ್ನ ಪ್ರೌಢಿಮೆಯನ್ನು ಪ್ರದರ್ಶನ ಮಾಡದೆ ಎಲ್ಲಾ ಸಹಪಾಠಿಗಳನ್ನೂ ನಗು ನಗುತ್ತಲೇ ಸ್ವೀಕರಿಸುವುದರ ಜೊತೆಗೆ ತನ್ನಲ್ಲಿರುವ ಅಪಾರ ಬುದ್ಧಿ ಶಕ್ತಿಯನ್ನು ಸದಾ ಹಂಚಿಕೊಳ್ಳುವ ಇವರ ಗುಣ ಮಹತ್ತರವಾದುದು .
ಕೇವಲ ಪಾಠ ಪ್ರವಚನಗಳಲ್ಲಿ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಾದ ಹಿಂದೂಸ್ಥಾನಿ ಸಂಗೀತ, ಪೈಂಟಿಂಗ್, ನೃತ್ಯಗಳಲ್ಲಿ ತೊಡಗಿಸಿಕೊಂಡಿರುವುದರ ಜೊತೆಗೆ  ಚೆಸ್ ನಲ್ಲಿ ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಿರುತ್ತಾರೆ. ಅಷ್ಟೇ ಏಕೆ ಸಾಮಾನ್ಯ ಜ್ಞಾನವನ್ನು ಕರತಲಾಮಲಕ  ಮಾಡಿಕೊಂಡಿರುವ ಇವರು ಒಂದು ವಿಶ್ವಕೋಶವಿದ್ದಂತೆ .
ತನ್ನ ಗುರುಹಿರಿಯರನ್ನು ಅಪಾರವಾಗಿ ಗೌರವಿಸುವ ಇವರು ಶಾಲೆಯಲ್ಲಿ ತನ್ನ ಎಲ್ಲಾ ಬೋಧಕ ಹಾಗೂ ಬೋಧಕೇತರ ವರ್ಗವನ್ನು , ಹಿರಿಯ ಕಿರಿಯ ಸಹಪಾಠಿಗಳನ್ನು ಪ್ರೀತಿಯಿಂದ ಕಾಣುವ ಗುಣ ಇವರದು. ಇಂತಹ ಅದ್ವಿತೀಯ ಗುಣವನ್ನು ಹೊಂದಿರುವ ಈ ನಮ್ಮ ಅದಿತಿ ಎಸ್ ಕುಲಕರ್ಣಿಯವರು ನಮ್ಮ ಶಾಲೆಯ ವಿದ್ಯಾರ್ಥಿನಿ ಎಂದು ಹೇಳಿಕೊಳ್ಳಲು ನಮಗೆ ಅತೀವ ಹೆಮ್ಮೆಯಾಗುತ್ತಿದೆ.