Saturday 18 June 2022

ಪ್ರಜಾಪ್ರಭುತ್ವದ ಪಾಠ ಹೇಳುವ ಶಾಲಾಚುನಾವಣೆ

ಸಿದ್ಧಾಪುರದ ಸರ್ಕಾರಿ ಪ್ರೌಢಶಾಲೆಯು ಅತ್ಯಂತ ಹೆಚ್ಚು ಮಕ್ಕಳಿರುವ ಸರ್ಕಾರಿ ಶಾಲೆ. ಈ ಶಾಲೆಯ 642 ಮಕ್ಕಳಲ್ಲಿ 611 ವಿದ್ಯಾರ್ಥಿಗಳು ಇಂದು ಶಾಲಾ ಸಂಸತ್ತಿಗಾಗಿ ನಡೆದ  ಮಾದರಿ ಮತದಾನದಲ್ಲಿ ಮತ ಚಲಾಯಿಸಿ ಪ್ರಜಾಪ್ರಭುತ್ವದ ಮೊದಲ ಪಾಠ ಪಡೆದರು.

ಶಾಲಾ ಸಂಸತ್ತು ಪ್ರಜಾಪ್ರಭುತ್ವದ ಆಚರಣೆಯ ಜೊತೆ ಪ್ರಜಾಪ್ರಭುತ್ವದ ಮೌಲ್ಯ ಮತ್ತು ಸಂಸ್ಕಾರವನ್ನು ಮಕ್ಕಳಿಗೆ ಎಳವೆಯಲ್ಲೇ ತಿಳಿಸುತ್ತದೆ. ಭಿನ್ನಾಭಿಪ್ರಾಯವನ್ನು ಗೌರವಿಸುವುದು, ಬಹುಮತದ ತೀರ್ಮಾನಕ್ಕೆ ಬದ್ಧರಾಗುವುದು, ಅಧಿಕಾರವನ್ನು ಪ್ರಶ್ನಿಸುವುದು, ಸಂವಿಧಾನದಲ್ಲಿ ನಂಬಿಕೆಯಿಡುವುದು ಇತ್ಯಾದಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ರೂಪಿಸುತ್ತದೆ. ನಾಯಕತ್ವದ ಗುಣಗಳನ್ನು ಅಭಿವೃದ್ಧಿಪಡಿಸುವಲ್ಲಿ ನೆರವಾಗುತ್ತದೆ.


ಇಂದಿನ ವಿದ್ಯಾರ್ಥಿ ಸಂಸತ್ ಚುನಾವಣೆಯನ್ನು ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿ ನಡೆಸಲಾಯಿತು. ಇವಿಎಂ ಆ್ಯಪ್ ಮೂಲಕ 6  ಬೂತ್‌ಗಳಲ್ಲಿ  ವಿದ್ಯಾರ್ಥಿಗಳು ಮತ ಚಲಾಯಿಸಿದರು. 

ವಿದ್ಯಾರ್ಥಿ ಉಪನಾಯಕ/ ಉಪನಾಯಕಿ ಚುನಾವಣಾ ಇ-ಬ್ಯಾಲೆಟ್

 


ವಿದ್ಯಾರ್ಥಿ ನಾಯಕ/ ನಾಯಕಿ ಚುನಾವಣೆಯ ಇ-ಬ್ಯಾಲೆಟ್




ಶಾಲಾ ನಾಯಕ ಸ್ಥಾನಕ್ಕೆ ಮೂರು ಅಭ್ಯರ್ಥಿಗಳು, ಉಪನಾಯಕ ಸ್ಥಾನಕ್ಕೆ ಏಳು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮೂರು ಸುತ್ತುಗಳ ಮತ ಎಣಿಕೆಯ ತರುವಾಯ ಅಂತಿಮವಾಗಿ ✌
  • ಭರತ್ ಕುಮಾರ್ ಶಾಲಾ ನಾಯಕನಾಗಿ, 
  • ಅಶ್ವಿನ್ ಉಪನಾಯಕನಾಗಿ, 
  • ಸ್ಪಂದನಾ ಉಳ್ಳೂರು ಶಾಲಾ ಉಪನಾಯಕಿಯಾಗಿ ಆಯ್ಕೆಗೊಂಡರು.
ಭರತ್ ಕುಮಾರ್, ವಿದ್ಯಾರ್ಥಿ ನಾಯಕ

ಅಶ್ವಿನ್, ವಿದ್ಯಾರ್ಥಿ ಉಪನಾಯಕ

ಸ್ಪಂದನಾ ಉಳ್ಳೂರು,  ವಿದ್ಯಾರ್ಥಿ ಉಪನಾಯಕ

ಪ್ರಭಾರ ಮುಖ್ಯ ಶಿಕ್ಷಕ ಉದಯ ಗಾಂವಕಾರ ಮುಖ್ಯ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಶಿಕ್ಷಕ ವೃಂದ ಮತ್ತು ಸಿಬ್ಬಂದಿಗಳು ಮತಗಟ್ಟೆ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. ಶಿಕ್ಷಕ ನಾಗರಾಜ್ ಶೆಟ್ಟಿ, ಉದಯ್ ಕುಮಾರ್ ಮತಗಳ ಲೆಕ್ಕ ಪ್ರಕ್ರಿಯೆಯನ್ನು ನಡೆಸಿದರು. ಎನ್‌ಎಸ್‌ಎಸ್ ಸ್ವಯಂಸೇವಕರು ಭದ್ರತಾ ಸಿಬ್ಬಂದಿಗಳಾಗಿ ಸಹಕರಿಸಿದರು.


ಮತದಾನ ಪ್ರಕ್ರಿಯೆಯ ಅಧಿಕೃತ ಆದೇಶದ ನಂತರ ಸ್ಪರ್ಧಿಗಳ ನಾಮಪತ್ರ ಸಲ್ಲಿಸುವಿಕೆ,  ಹಿಂತೆಗೆದುಕೊಳ್ಳುವಿಕೆ, ಚುನಾವಣಾ ಪ್ರಚಾರ ಇತ್ಯಾದಿ ಚುನಾವಣಾ ಪ್ರಕ್ರಿಯೆಗಳು ಸಹ ಸಾರ್ವತ್ರಿಕ ಚುನಾವಣೆಯ ರೀತಿಯಲ್ಲಿ ನಡೆದಿದ್ದವು.



ಮತ ಎಣಿಕೆಯ ನಂತರ ನಡೆದ ಸಭೆಯಲ್ಲಿ ಗ್ರಾ. ಪಂ. ಅಧ್ಯಕ್ಷರಾದ ಶೇಖರ್ ಕುಲಾಲ್  ವಿಜೇತರಿಗೆ ಅಧಿಕೃತ ಪ್ರಮಾಣ ಪತ್ರಗಳನ್ನು ವಿತರಿಸಿ ಶುಭ ಹಾರೈಸಿದರು.  ಗ್ರಾ. ಪಂ. ಸದಸ್ಯರಾದ ಭಾಸ್ಕರ ಶೆಟ್ಟಿ ಉಪಸ್ಥಿತರಿದ್ದರು. ರಾಘವೇಂದ್ರ ಚಾತ್ರಮಕ್ಕಿ ಕಾರ್ಯಕ್ರಮ ನಿರ್ವಹಿಸಿದರು.




Tuesday 14 June 2022

ಹತ್ತನೇ ತರಗತಿ ಫಲಿತಾಂಶ: ಸಿದ್ಧಾಪುರ ಪ್ರೌಢಶಾಲೆಯ ಸಾಧನೆ

 2021-22 ನೇ ಸಾಲಿನ  ಎಸ್ ಎಸ್ ಎಲ್ ಸಿ ಪರೀಕ್ಷೆ ತೆಗೆದುಕೊಂಡ ಸಿದ್ಧಾಪುರ ಪ್ರೌಢಶಾಲೆ 195 ವಿದ್ಯಾರ್ಥಿಗಳಲ್ಲಿ  182 ವಿದ್ಯಾರ್ಥಿಗಳು ಪಾಸಾಗುವ ಮೂಲಕ 93.33ಶೇಖಡಾ ಉತ್ತೀರ್ಣತೆಯನ್ನು ದಾಖಲಿಸಿದೆ. ಕನ್ನಡ ಮಾಧ್ಯಮದ 86 ವಿದ್ಯಾರ್ಥಿಗಳಲ್ಲಿ 77 ವಿದ್ಯಾರ್ಥಿಗಳು ಪಾಸಾಗಿದ್ದರೆ ಇಂಗ್ಲೀಷ್ ಮಾಧ್ಯಮದ 109 ವಿದ್ಯಾರ್ಥಿಗಳಲ್ಲಿ 105 ವಿದ್ಯಾರ್ಥಿಗಳು ಪಾಸಾಗಿದ್ದಾರೆ. 

195 ವಿದ್ಯಾರ್ಥಿಗಳಲ್ಲಿ 68 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲೂ 92 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲೂ ಪಾಸಾಗಿದ್ದಾರೆ. 

ಶಾಲೆಯ ಕೀರ್ತಿಯನ್ನು ನಾಡಿಗೆಲ್ಲ ವ್ಯಾಪಿಸಲು ಕಾರಣರಾದ ವೈಷ್ಣವಿ, ರಿತಿಕಾ ಮತ್ತು ಸಮೀಕ್ಷಾ

625 ಅಂಕಗಳಿಗೆ ಎಲ್ಲ  625 ಅಂಕಗಳನ್ನು ಪಡೆದ  ವೈಷ್ಣವಿ , 624  ಅಂಕಗಳನ್ನು ಪಡೆದ ರಿತಿಕಾ ಮತ್ತು 621 ಅಂಕಗಳನ್ನು ಪಡೆದ ಸಮೀಕ್ಷಾ ಜೊತೆಯಲ್ಲಿ ಒಟ್ಟೂ 11 ವಿದ್ಯಾರ್ಥಿಗಳು 600 ಕ್ಕೂ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ.