Friday 6 March 2020

ಸಿದ್ಧಾಪುರ: ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ

3/3/2020 ಸಿದ್ಧಾಪುರ
ಸರಕಾರಿ ಪ್ರೌಢಶಾಲೆ, ಸಿದ್ಧಾಪುರ ಇದರ ಎನ್. ಎಸ್. ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರವು ಸಿದ್ಧಾಪುರದ ಪ್ರಾಥಮಿಕ ಶಾಲೆಯ ಅವರಣದಲ್ಲಿ  ನಡೆಯಿತು. ಸಿದ್ಧಾಪುರ ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಶ್ರೀಮತಿ ಸರೋಜಿನಿ ಶೆಡ್ತಿ ಎನ್. ಎಸ್. ಎಸ್ ಘಟಕದ ಧ್ವಜಾರೋಹಣ ನಡೆಸುವ ಮೂಲಕ ಶಿಬಿರಕ್ಕೆ ವಿದ್ಯುಕ್ತ ಆರಂಭ ನೀಡಿದರು. ಪ್ರೌಢಶಾಲಾ ಎಸ್. ಡಿ. ಎಂ. ಸಿ ಕಾರ್ಯಾಧ್ಯಕ್ಷರಾದ ಶ್ರೀ ಮಹೇಶ ನಾಯಕ, ಸ್ಥಳೀಯ ಲಯನ್ಸ್  ಕ್ಲಬ್ ಅಧ್ಯಕ್ಷರಾದ ಶ್ರೀ ಮನೋರಾಜ ಶೆಟ್ಟಿ ಮತ್ತು ಉಭಯ ಶಾಲೆಗಳ ಮುಖ್ಯ ಶಿಕ್ಷಕರಾದ ಶ್ರೀ ಶೈಲೇಂದ್ರನಾಥ ಮತ್ತು ಶ್ರೀ ನರಸಿಂಹ ನಾಯ್ಕ್  ಉಪಸ್ಥಿತರಿದ್ದರು.  ವಿದ್ಯಾರ್ಥಿ ಸ್ವಯಂ ಸೇವಕರಿಂದ ಗೌರವ ರಕ್ಷೆ ಪಡೆದ ನಂತರ ಮಾತನಾಡಿದ ಶ್ರೀಮತಿ ಸರೋಜಿನಿ ಶೆಡ್ತಿಯವರು “ ನಾಳಿನ ಪ್ರಜೆಗಳಾದ ಇಂದಿನ ವಿದ್ಯಾರ್ಥಿಗಳಲ್ಲಿ ಸೇವಾ ಭಾವನೆ ಬಲಿತು ಬೆಳೆಯಬೇಕು. ಅವರೇ ನಾಡಿನ ಸಿರಿ"  ಎಂದು ಧ್ವಜ ಸಂದೇಶ ನೀಡಿದರು.
   ಸಿದ್ಧಾಪುರ ಗ್ರಾಮ ಪಂಚಾಯತ್ ಮತ್ತು ಸಿದ್ಧಾಪುರದ ಗ್ರಾಮ ವಿಕಾಸ ಸಮಿತಿಯ ಸಹಕಾರದೊಂದಿಗೆ ಸ್ವಯಂ ಸೇವಕರು ಸಿದ್ಧಾಪುರ ಪೇಟೆಯ ಆಯಕಟ್ಟಿನ ಜಾಗಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಮಾಡುವುದರೊಂದಿಗೆ ಸಾರ್ವಜನಿಕರಲ್ಲಿ ಶುಚಿತ್ವದ ಕುರಿತು ಜಾಗೃತಿ ಮೂಡಿಸಿದರು. ಉದ್ಯಮಿ ಶ್ರೀಕಾಂತ ನಾಯಕ, ತಾಲೂಕು ಪಂಚಾಯತ ಸದಸ್ಯರಾದ ವಾಸುದೇವ ಪೈ, ಶ್ರೀ ಭಾಸ್ಕರ ಶೆಟ್ಟಿ ಶ್ರಮದಾನ ಕಾರ್ಯದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
  ಶ್ರಮದಾನ ಕಾರ್ಯದ ನಂತರ ಪ್ರಥಮ ಚಿಕಿತ್ಸೆಯ ಕುರಿತು ಅರಿವು ನೀಡುವಂತಹ `ಬದುಕಿ, ಬದುಕಿಸಿ’ ಪ್ರಾತ್ಯಕ್ಷಿಕೆ-ಉಪನ್ಯಾಸ ಕಾರ್ಯಕ್ರಮವನ್ನು ಸರಕಾರಿ ಪ್ರೌಢಶಾಲೆ, ಆವರ್ಸೆ ಇಲ್ಲಿನ ಶಿಕ್ಷಕರಾದ ಶ್ರೀ ಅಝಾದ್ ಮೊಹಮ್ಮದ್ ನಡೆಸಿಕೊಟ್ಟರು.

ಮಧ್ಯಾಹ್ನದ ಸಹಭೋಜನದ ನಂತರ ನಡೆದ ವಿದ್ಯಾರ್ಥಿಗಳ  ಸಾಂಸ್ಕೃತಿಕ ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ಸಫಲವಾಯಿತು. ಆನಂತರ ನಡೆದ ಶಿಬಿರದ ಸಮಾರೋಪ ಸಮಾರಂಭದಲ್ಲಿ `ಅರಿವಿನ ಅಂಗಣ’ ಪತ್ರಿಕಾ ಅಂಕಣಗಳ ಸಂಗ್ರಹವನ್ನು ಅನಾವರಣಗೊಳಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ರೋಹಿತಕುಮಾರ ಶೆಟ್ಟಿಯವರು “ ಪದವಿ ಹಂತದಿಂದ ಪ್ರೌಢ ಹಂತದವರೆಗೆ ರಾಷ್ಟ್ರೀಯ ಸೇವಾ ಯೋಜನೆಯನ್ನು ವಿಸ್ತರಿಸಿರುವುದು ಸ್ವಾಗತಾರ್ಹ. ಈ ಯೋಜನೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಹಕ್ಕಿಗಿಂತ ಕರ್ತವ್ಯವು ಪ್ರಧಾನ ಎಂದು ಅರಿಯುವಂತಾಗಲಿ”  ಎಂದು ಹಾರೈಸಿದರು.

 ತಾ.ಪಂ ಸದಸ್ಯರಾದ ವಾಸುದೇವ ಪೈ, ಉದ್ಯಮಿ ಶ್ರೀಕಾಂತ ನಾಯಕ, ಗ್ರಾ.ಪಂ ಉಪಾಧ್ಯಕ್ಷರಾದ ಶ್ರೀ ಭರತ ಕಾಮತ್, ಸ.ಹಿ.ಪ್ರಾ ಶಾಲೆ ಸಿದ್ಧಾಪುರ ಇದರ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಸುಧಾಕರ ಶೆಟ್ಟಿ, ಉಭಯ ಶಾಲೆಗಳ ಮುಖ್ಯ ಶಿಕ್ಷಕರಾದ ಶ್ರೀ ಶೈಲೇಂದ್ರನಾಥ ಮತ್ತು ಶ್ರೀ ನರಸಿಂಹ ನಾಯ್ಕ್  ಉಪಸ್ಥಿತರಿದ್ದರು.
ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಶ್ರೀಮತಿ ವಸಂತಿ ಎಲ್ಲರನ್ನೂ ಸ್ವಾಗತಿಸಿದರು, ಕಾರ್ಯಕ್ರಮಾಧಿಕಾರಿ ಶ್ರೀ ರಮಾನಂದ ನಾಯಕ, ಶಿರಗುಂಜಿ ಪ್ರಾಸ್ಥಾವಿಕ ನುಡಿಗಳನ್ನಾಡಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ರವೀಂದ್ರ ಶೆಟ್ಟಿ ಎಲ್ಲರಿಗೂ ವಂದಿಸಿದರು.

No comments:

Post a Comment